ಜಿಲ್ಲೆ

ಮೊದಲ ಹಂತದ ಗ್ರಾಪಂ ಚುನಾವಣೆ ಜಿಲ್ಲೆಯಲ್ಲಿ ಮತದಾರರಿಂದ ಉತ್ತಮ ಸ್ಪಂದನೆ

ವಿಜಯಪುರ: ಜಿಲ್ಲೆಯಲ್ಲಿ ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗೆ ಮತದಾರರಿಂದ ಉತ್ತಮ ಸ್ಪಂದನೆ ದೊರಕಿದೆ. ಬೆಳ್ಳಂಬೆಳಗ್ಗೆ 7 ಗಂಟೆಯಿಂದಲೂ ಚಳಿಯಲ್ಲಿ ಸರತಿ ಸಾಲಿನಲ್ಲಿ ನಿಂತು ಮತದಾರರು ಮತದಾನ ಮಾಡಿದರು. ಜಿಲ್ಲಾಡಳಿತದಿಂದ ಮತಗಟ್ಟೆಗಳಲ್ಲಿ ಸ್ಯಾನಿಟೈಸರ್, ಥರ್ಮಲ್ ಸ್ಕಾೃನಿಂಗ್ ವ್ಯವಸ್ಥೆಯನ್ನು ಮಾಡಲಾಗಿತ್ತು. ಮತದಾರರು ಕಡ್ಡಾಯವಾಗಿ ಮಾಸ್ಕ್ ಧರಿಸುವ ಮೂಲಕ ಮತಗಟ್ಟೆಗೆ ತೆರಳುತ್ತಿದ್ದ ದೃಶ್ಯಗಳು ಕಂಡು ಬಂದವು.

ಪರಸ್ಪರ ಅಂತರ ಮರಿಚೀಕೆ

ಮತಗಟ್ಟೆಗಳ ಸುತ್ತಮುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರೂ ಜನಜಂಗುಳಿ ಮಾತ್ರ ಕಡಿಮೆ ಆಗಿರಲಿಲ್ಲ. ವಿಜಯಪುರ ತಾಲೂಕಿನ ತೊರವಿ ಗ್ರಾಮ ಸೇರಿದಂತೆ ಅನೇಕ ಕಡೆಗಳಲ್ಲಿ ಮತಗಟ್ಟೆ ಕೇಂದ್ರದ ಹೊರಗಡೆ ರಾಜಕೀಯ ಮುಖಂಡರು, ಯುವಕರು, ಗ್ರಾಮದ ಹಿರಿಯರು ಗುಂಪುಗೂಡಿದ ದೃಶ್ಯಾವಳಿಗಳು ಸರ್ವೇ ಸಾಮಾನ್ಯವಾಗಿತ್ತು. ಬೆಳಗ್ಗೆಯಿಂದಲೇ ಮತಗಟ್ಟೆ ಕೇಂದ್ರ, ಅಂಗಡಿ, ಶಾಲೆ ಹೊರಗಡೆ, ಪ್ರಮುಖ ಮುಖಂಡರ ಮನೆಗಳ ಮುಂದೆ ಜನರು ನೆರೆದಿದ್ದರು. ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದ ಘಟನೆಗಳು ಕಂಡು ಬಂದವು.

ಕೊನೆ ಹಂತದವರೆಗೆ ತಂತ್ರ

ಗ್ರಾಮ ಪಂಚಾಯಿತಿ ಚುನಾವಣೆಯೂ ಯಾವುದೇ ವಿಧಾನಸಭೆ, ಲೋಕಸಭೆ ಚುನಾವಣೆಗಳಿಗಿಂತ ಕಡಿಮೆ ಇಲ್ಲ ಎನ್ನುವಂತಿತ್ತು. ಹಳ್ಳಿಗಳಲ್ಲಿ ಕೊನೆ ಹಂತದವರೆಗೂ ಕೆಲ ಮುಖಂಡರು, ಯುವಕರು ಅಖಾಡದಲ್ಲಿರುವ ಅಭ್ಯರ್ಥಿಗಳ ಪರ ಮತ ಹಾಕುವಂತೆ ಓಲೈಸುತ್ತಿದ್ದ ದೃಶ್ಯಗಳು ಕಂಡು ಬಂದವು. ಮತಗಟ್ಟೆ ಕೇಂದ್ರಕ್ಕೆ ಬರುತ್ತಿದ್ದ ಮತದಾರರನ್ನು ತಡೆದು ತಮ್ಮ ಬೆಂಬಲಿತ ಅಭ್ಯರ್ಥಿಗಳಿಗೆ ಮತ ಹಾಕುವಂತೆ ಮನವಿ ಮಾಡಿಕೊಳ್ಳುತ್ತಿದ್ದ ಮುಖಂಡರ ಸಂಖ್ಯೆ ಹೆಚ್ಚಾಗಿತ್ತು.

ಗುಳೆ ಹೋಗಿದ್ದವರು ವಾಪಸ್

ಜಿಲ್ಲೆಯಲ್ಲಿ ಗುಳೆ ಹೋಗುವವರ ಸಂಖ್ಯೆ ಅಧಿಕವಿದ್ದು, ಚುನಾವಣೆ, ಹಬ್ಬ ಹರಿದಿನಗಳಿಗೆ ಮಾತ್ರ ವಾಪಸ್ ಆಗುತ್ತಾರೆ. ಮಹಾರಾಷ್ಟ್ರ, ಗೋವಾ ಕಡೆಗಳಿಗೆ ಗುಳೆ ಹೋಗಿದ್ದ ಜನರು ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ತಮ್ಮ ಗ್ರಾಮಗಳಿಗೆ ಮರಳಿದ್ದು ವಿಶೇಷವಾಗಿತ್ತು. ಕಣದಲ್ಲಿರುವ ಅಭ್ಯರ್ಥಿಗಳು ಗುಳೆ ಹೋಗಿದ್ದವರನ್ನು ಖಾಸಗಿ ವಾಹನಗಳ ಮೂಲಕ ಕರೆಸಿಕೊಂಡಿದ್ದರು.

ಶತಾಯುಷಿಗಳಿಂದ ಹಕ್ಕು ಚಲಾವಣೆ

ಮೊದಲ ಹಂತದ ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆ ಶತಾಯುಷಿಗಳು ಮತದಾನ ಮಾಡುವ ಮೂಲಕ ಗಮನ ಸೆಳೆದರು. ಮಖಣಾಪುರ ಗ್ರಾಪಂನಲ್ಲಿ ಭಾಮುಲು ಹುನ್ನು ಲಮಾಣಿ (101), ಹಡಗಲಿ ಗ್ರಾಮದಲ್ಲಿ ಬಾಳಾರಾಮ ರಜಪೂತ (100) ತಮ್ಮ ಹಕ್ಕು ಚಲಾಯಿಸಿದರು. ಕಣ್ಣು ಕಾಣದ 80 ವರ್ಷದ ಅಂಧ ವಯೋವೃದ್ಧ ಮಾನಸಿಂಗ ನಾಯಕ ಅವರು ಐನಾಪುರ ತಾಂಡಾದ ಸರ್ಕಾರಿ ಶಾಲೆ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ನವ ದಂಪತಿಯಿಂದ ಮತದಾನ

ಕಗ್ಗೋಡದ ಸರ್ಕಾರಿ ಶಾಲೆ ಮತಗಟ್ಟೆಯಲ್ಲಿ ನವದಂಪತಿ ಮತದಾನ ಮಾಡಿದರು. ಚನ್ನಬಸು ಹೆಗಡಿಹಾಳ ಹಾಗೂ ಪವಿತ್ರಾ ಚನ್ನಬಸು ಹೆಗಡಿಹಾಳ ಅವರು ಮತದಾನ ಮಾಡುವ ಮೂಲಕ ಗಮನ ಸೆಳೆದರು. ಅದೇ ರೀತಿ ಪ್ರಥಮ ಬಾರಿಗೆ ಯುವಕ, ಯುವಕರು ಮತದಾನ ಮಾಡಿದ್ದು ವಿಶೇಷವಾಗಿತ್ತು.