ವಿಜಯಪುರ: ಭಾರತ ಕಮ್ಯುನಿಷ್ಟ ಪಕ್ಷ (ಮಾರ್ಕ್ಸ್‌ವಾದಿ)ದ ಜಿಲ್ಲಾ ಸಮಿತಿಯಿಂದ 16 ಅಂಶಗಳ ಬೇಡಿಕೆಗೆ ಪರಿಹಾರ ಮತ್ತು ಪರ್ಯಾಯಕ್ಕಾಗಿ ಒತ್ತಾಯಿಸಿ ಶನಿವಾರ ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ್ ಅವರಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಭೀಮಶಿ ಕಲಾದಗಿ ಮಾತನಾಡಿ, ಕರೊನಾ ಮಹಾಸೋಂಕಿನಿಂದ ಕೆಲವು ವರ್ಗದ ಜನರ ಜೀವನ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಆದಾಯ ತೆರಿಗೆ ವ್ಯಾಪ್ತಿಗೆ ಬರದ ಎಲ್ಲ ಬಡ ಕುಟುಂಬಗಳಿಗೆ ತಕ್ಷಣದಿಂದ ಮುಂದಿನ ಆರು ತಿಂಗಳವರೆಗೆ ತಿಂಗಳಿಗೆ 7500ರೂ. ನಗದು ವರ್ಗಾವಣೆ ಮಾಡಬೇಕು. ಅಗತ್ಯವಿರುವ ಎಲ್ಲರಿಗೂ ಮುಂದಿನ ಆರು ತಿಂಗಳವರೆಗೆ ಪ್ರತಿಯೊಬ್ಬ ವ್ಯಕ್ತಿಗೆ 10 ಕೆಜಿಯಂತೆ ಉಚಿತ ಆಹಾರ ಧಾನ್ಯಗಳನ್ನು ವಿತರಣೆ ಮಾಡಬೇಕು. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನೀಡುವ ಕೂಲಿ ದರವನ್ನು ಏರಿಸಿ ವರ್ಷದಲ್ಲಿ 200 ದಿನಗಳ ಕೆಲಸದ ಖಾತ್ರಿಯನ್ನು ಒದಗಿಸಬೇಕು. ನಗರ ಉದ್ಯೋಗ ಖಾತ್ರಿ ಕಾಯ್ದೆಯನ್ನು ತರಬೇಕು. ಎಲ್ಲ ನಿರುದ್ಯೋಗಿಗಳಿಗೆ ನಿರುದ್ಯೋಗಿ ಭತ್ಯೆ ಪ್ರಕಟಿಸಬೇಕು ಎಂದು ಒತ್ತಾಯಿಸಿದರು.
ಸಿಐಟಿಯು ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಹಂದ್ರಾಳ ಮಾತನಾಡಿ, ಅಂತರರಾಜ್ಯ ವಲಸೆ ಕೆಲಸಗಾರರ ಉದ್ಯೋಗ ಮತ್ತು ಸೇವಾ ಷರತ್ತುಗಳ ನಿಯಂತ್ರಣ ಕಾಯ್ದೆ 1979ನ್ನು ತೆಗೆದು ಹಾಕುವ ಪ್ರಸ್ತಾವವನ್ನು ರದ್ದು ಮಾಡಬೇಕು. ಬದಲಿಗೆ ಈ ಕಾಯ್ದೆಯನ್ನು ಇನ್ನಷ್ಟು ಬಲಪಡಿಸಬೇಕು. ಸಾರ್ವಜನಿಕ ಆರೋಗ್ಯಕ್ಕೆ ಕೇಂದ್ರಿಯ ವೆಚ್ಚವನ್ನು ಕನಿಷ್ಠ ಜಿಡಿಪಿಯ ಶೇ.1.3ಕ್ಕೆ ಹೆಚ್ಚಿಸಬೇಕು. ಅಗತ್ಯ ವಸ್ತುಗಳ ಕಾಯ್ದೆಯನ್ನು ತೆಗೆದು ಹಾಕುವ ಮತ್ತು ಎಪಿಎಂಸಿ ಕಾಯ್ದೆಯನ್ನು ತಿದ್ದುಪಡಿ ಮಾಡುವ ಎಲ್ಲ ಸುಗ್ರಿವಾಜ್ಞೆಗಳನ್ನು ರದ್ದು ಮಾಡಬೇಕು. ಈಗಿರುವ ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಅಮಾನತು ಮಾಡುವ ಎಲ್ಲ ಪ್ರಸ್ತಾವನ್ನು ಹಿಂತೆಗೆದುಕೊಳ್ಳಬೇಕು. ವಿಮೆ ರಕ್ಷಣಾ ಉತ್ಪಾದನಾ ವಲಯಗಳಲ್ಲಿನ ಉದ್ದಿಮೆಗಳ ಖಾಸಗೀಕರಣವನ್ನು ರದ್ದು ಮಾಡಬೇಕು. ಅಕ್ರಮ ಸಾಗುವಳಿ ಭೂಮಿ ಸಕ್ರಮಗೊಳಿಸಿ ಹಕ್ಕು ಪತ್ರ ಕೊಡಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಅಣ್ಣಾರಾಯ ಈಳಗೇರ, ಸುರೇಖಾ ರಜಪೂತ, ಭೀಮಶಿ ಕೊಟ್ಯಾಳ, ಸಲಿಂ ನಾಯ್ಕೋಡಿ, ಬಸೀರ ತಾಂಬೆ, ಕಾಜಾಸಾಬ ಕೋಲಾರ, ರಾಜಮಾ ನದಾಫ್, ಅನುಸೂಯಾ ಹಜೇರಿ, ಧರೆಪ್ಪ ಗುಗ್ಗರಿ, ಚನಗೊಂಡ ಬಿರಾದಾರ, ಸಂಗನಗೌಡ ಬಿರಾದಾರ, ಸಿದ್ದಯ್ಯ ನ್ಯಾಮಗೌಡ, ಯಲ್ಲಪ್ಪ ಮುಂಜೆ, ದಯಾಗೌಡ ಬಿರಾದಾರ, ಧರೆಪ್ಪ ಮಿಸ್ಕಿನ್, ನಾಗಪ್ಪ ಕಂಬಾರ, ಸಿದ್ದಪ್ಪ ಬಾಲಣ್ಣವರ, ತಿಪ್ಪಣ್ಣ ಹಜೇರಿ, ಸಾಬು ಚವರಿ, ಪಾಂಡು ಕಾಳೆ ಮತ್ತಿತರರಿದ್ದರು.