ಜಿಲ್ಲೆ

ಅಕ್ಕಮಹಾದೇವಿ ವಿವಿಯಲ್ಲಿ ಅಪರಾತಪರಾ?

ಪರಶುರಾಮ ಭಾಸಗಿ
ವಿಜಯಪುರ:
ರಾಜ್ಯದ ಏಕೈಕ ಮಹಿಳಾ ವಿವಿ ಖ್ಯಾತಿಯ ಅಕ್ಕಮಹಾದೇವಿ ವಿವಿಯ ಸಹಾಯಕ ಕುಲ ಸಚಿವರ ಹುದ್ದೆಗೆ ನಡೆದ ನೇಮಕಾತಿಯಲ್ಲಿ ಗೊಂದಲ ಸೃಷ್ಟಿಯಾಗಿದ್ದು ಅಕ್ರಮದ ವಾಸನೆ ಹರಡಿದೆ !

ಕಳೆದ ಮೇ 8, 2019ರಂದು ಕಲಂ 371 (ಜೆ) ಅಡಿ ಕರೆಯಲಾಗಿದ್ದ ಸಹಾಯಕ ಕುಲಸಚಿವರ ಹುದ್ದೆಗೆ ಈಗಾಗಲೇ ನೇಮಕ ಪ್ರಕ್ರಿಯೆ ಪೂರ್ಣಗೊಂಡಿದ್ದು, ಸದರಿ ನೇಮಕಾತಿ ನಿಯಮ ಬಾಹಿರವಾಗಿದೆಯಲ್ಲದೇ ಆಡಳಿತಾನುಭವ ಇಲ್ಲದ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಂಡಿರುವ ಗಂಭೀರ ಆರೋಪ ಕೇಳಿ ಬಂದಿದೆ.

ಆದರೆ, ವಿವಿ ಮಾತ್ರ ನಿಯಮಾನುಸಾರವೇ ನೇಮಕಾತಿ ಮಾಡಿಕೊಂಡಿರುವುದಾಗಿ ಸಮಜಾಯಿಷಿ ನೀಡುತ್ತಿದೆ. ವಾಸ್ತವದಲ್ಲಿ ದಾಖಲೆ ಪರಿಶೀಲಿಸಲಾಗಿ ಅಭ್ಯರ್ಥಿ ಆಯ್ಕೆಯಲ್ಲಿ ಸಾಕಷ್ಟು ಗೊಂದಲ ಎದ್ದು ಕಾಣುತ್ತಿದೆ. ಅಲ್ಲದೇ ಸಂಬಂಧಿಸಿದಂತೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿಯೂ ವಿಶೇಷ ಸಮಿತಿ ರಚಿಸಲು ಶಿಫಾರಸು ಮಾಡಲಾಗಿದೆ.

ಗೊಂದಲವೇನು?
ಸಾಮಾನ್ಯ ಇತರೆ ವರ್ಗಕ್ಕೆ ಮೀಸಲಾಗಿದ್ದ ಸಹಾಯಕ ಕುಲ ಸಚಿವರ ಹುದ್ದೆಗೆ ಒಟ್ಟು 15 ಅರ್ಜಿಗಳು ಸ್ವೀಕೃತವಾಗಿದ್ದು ಅದರಲ್ಲಿ 2 ಅರ್ಜಿಗಳು ಮಾತ್ರ ಕ್ರಮ ಬದ್ಧವಾಗಿದ್ದವು. ಇಬ್ಬರಿಗೂ ಪರೀಕ್ಷೆಗೆ ಹಾಜರಾಗಲು ಪ್ರವೇಶ ಪತ್ರ ನೀಡಲಾಗಿದೆ. ಆ ಪೈಕಿ ರಾಜೇಶ್ವರಿ ಬದನೂರ ಒಬ್ಬರೇ ಪರೀಕ್ಷೆ ಬರೆದಿದ್ದು ಅವರ ವಿದ್ಯಾರ್ಹತೆ ಹಾಗೂ ಸೇವಾ ಅನುಭವ ಪರಿಗಣಿಸಿ ನೇಮಕಾತಿ ಮಾಡಿಕೊಳ್ಳಲಾಗಿದೆ ಎಂದು ವಿವಿ ಆಡಳಿತ ಮಂಡಳಿ ಸಮಜಾಯಿಷಿ ನೀಡಿದೆ.

ಆದರೆ, ಸಹಾಯಕ ಕುಲಸಚಿವರ ಹುದ್ದೆಗೆ 8 ವರ್ಷ ಆಡಳಿತಾನುಭವ ಬೇಕು. ಅಂದರೆ ಅಧೀಕ್ಷಕರ ಹುದ್ದೆಯಲ್ಲಿ ಅಥವಾ ಅದಕ್ಕೆ ಸರಿಸಮನಾದ ಹುದ್ದೆಯಲ್ಲಿ 8 ವರ್ಷ ಸೇವಾನುಭವ ಹೊಂದಿರಬೇಕೆಂದು ತಿಳಿಸಿ, ಆಡಳಿತಾನುಭವ ಇಲ್ಲದ 5 ವರ್ಷಗಳ ಸಹಾಯಕಳೆಂದು ಅಂದರೆ ಎಸ್‌ಡಿಎ ಹುದ್ದೆಯಲ್ಲಿ ಸೇವೆ ಸಲ್ಲಿಸಿದ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಅರ್ಹ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಿ ಬೇಕಾದವರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂಬ ಆರೋಪವಿದೆ.

ವಾಸ್ತವವೇನು?
ವಾಸ್ತವದಲ್ಲಿ ಸದರಿ ಅಭ್ಯರ್ಥಿ ಆಡಳಿತಾನುಭವ ಹೊಂದಿಲ್ಲವೆಂಬುದಕ್ಕೆ ‘ವಿಜಯವಾಣಿ’ಗೆ ಕೆಲವು ದಾಖಲೆ ಲಭ್ಯವಾಗಿವೆ. ರಾಜೇಶ್ವರಿ ಬದನೂರ ಅವರು ಬೀದರನಲ್ಲಿ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯದಲ್ಲಿ ಮೇ 31, 2019 ರಂದು ಹಿರಿಯ ಸಹಾಯಕ ಹುದ್ದೆಗೆ ಮುಂಬಡ್ತಿ ಪಡೆದಿದ್ದಾರೆ. ಅದಕ್ಕೂ ಮುಂಚೆ ಅವರು ಕಿರಿಯ ಸಹಾಯಕರೆಂದು ಸೇವೆ ಸಲ್ಲಿಸಿದ್ದು ದಾಖಲೆಯಿಂದ ತಿಳಿದು ಬರುತ್ತಿದೆ.

ಅಲ್ಲದೇ, ಇವರು ಆ. 18, 2003 ರಿಂದ ಜ.31, 2013ರವರೆಗೆ ವಿವಿಯಲ್ಲಿ ಶೀಘ್ರಲಿಪಿಗಾರರಾಗಿ ಕೆಲಸ ನಿರ್ವಹಿಸಿದ್ದಾರಾದರೂ ಅದು ತಾತ್ಕಾಲಿಕ ಆಧಾರದ ಮೇಲಿದೆ. ಹಾಗಾದರೆ ಸಹಾಯಕ ಕುಲಸಚಿವರ ಹುದ್ದೆಗೆ 8 ವರ್ಷ ಆಡಳಿತಾನುಭವ ಬೇಕಿದ್ದು, ರಾಜೇಶ್ವರಿ ಅವರ ಆಡಳಿತ ಅನುಭವ ಸಮರ್ಪಕವಾಗಿದೆಯೇ? ಇವರು ನೇಮಕಾತಿ ಅಧಿಸೂಚನೆ ಪ್ರಕಾರ ಹೇಗೆ ಅರ್ಹರಾಗುತ್ತಾರೆ? ತಾತ್ಕಾಲಿಕ ಆಧಾರದ ಮೇಲೆಯೇ ಕೆಲವರು 16 ವರ್ಷ ಸೇವೆ ಸಲ್ಲಿಸಿದ್ದರೂ ಅವರು ಅನರ್ಹರು ಹೇಗಾದರು? ಎಂಬುದಕ್ಕೆ ಕುಲಪತಿಯಿಂದ ಸಮರ್ಪಕ ಉತ್ತರ ದೊರೆಯುತ್ತಿಲ್ಲ. ಇದು ಸಂಶಯಕ್ಕೆ ಎಡೆಮಾಡಿಕೊಡುತ್ತಿದೆ.

ಸದ್ಯಕ್ಕೆ ನಾನು ಊರಲ್ಲಿಲ್ಲ. ಕೆಲವು ಪ್ರಕರಣಗಳು ನ್ಯಾಯಾಲಯದ ಮಟ್ಟದಲ್ಲಿರುವ ಕಾರಣ ಆ ಬಗ್ಗೆ ಪ್ರತಿಕ್ರಿಯಿಸಲ್ಲ.
ಪ್ರೊ. ಸಬಿಹಾ ಭೂಮಿಗೌಡ, ಕುಲಪತಿ ಅಕ್ಕಮಹಾದೇವಿ ಮಹಿಳಾ ವಿವಿ

ಸದರಿ ಹುದ್ದೆಗೆ ಅರ್ಹ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಿ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ತಮಗೆ ಬೇಕಾದವರನ್ನು ನೇಮಕ ಮಾಡಿಕೊಂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಹೀಗಾಗಿ ತನಿಖೆಗಾಗಿ ಲೋಕಾಯುಕ್ತಕ್ಕೂ ದೂರು ನೀಡಿರುವೆ.
ರಾಜಶೇಖರ ಮಗಿಮಠ, ದೂರುದಾರ, ಬಿಜೆಪಿ ಮುಖಂಡ