ಪರಶುರಾಮ ಭಾಸಗಿ
ವಿಜಯಪುರ: ಸಿಂದಗಿ ಉಪ ಚುನಾವಣೆಗೆ ಅಧಿಸೂಚನೆ ಪ್ರಕಟಗೊಂಡ ಬೆನ್ನಲ್ಲೇ ಅಖಾಡಕ್ಕಿಳಿದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್‌ನ ನಾಲ್ವರು ಘಟಾನುಘಟಿಗಳನ್ನು ಪಕ್ಷಕ್ಕೆ ಕರೆತರುವ ಮೂಲಕ ಚುನಾವಣೆ ತಂತ್ರಗಾರಿಕೆ ಹೆಣೆಯಲು ಸಜ್ಜಾಗಿದೆ !
ಕಾಂಗ್ರೆಸ್‌ನ ಇಬ್ಬರು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರು, ಓರ್ವ ಸದಸ್ಯ ಹಾಗೂ ಬಸವನಬಾಗೇವಾಡಿಯ ಜೆಡಿಎಸ್ ಅಭ್ಯರ್ಥಿ ಸೇರಿ ಹಲವು ಘಟಾನುಘಟಿಗಳು ಶೀಘ್ರದಲ್ಲೇ ಹೂ ಮುಡಿಯಲಿದ್ದಾರೆ.
ಈಗಾಗಲೇ ಉನ್ನತ ಮಟ್ಟದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದ್ದು, ಅ.5 ರಂದು ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ಸೇರಿದಂತೆ ರಾಜ್ಯ ನಾಯಕರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಗೆ ವೇದಿಕೆ ಸಜ್ಜುಗೊಳಿಸುತ್ತಿರುವ ಮಾಹಿತಿ ಲಭ್ಯವಾಗಿದೆ. ಇಂಡಿ, ಬಬಲೇಶ್ವರ, ಬಸವನಬಾಗೇವಾಡಿ ಕ್ಷೇತ್ರದ ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗುತ್ತಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಯಾರು ಆ ಘಟಾನುಘಟಿಗಳು?
ಕಾಂಗ್ರೆಸ್‌ನ ಪ್ರಬಲ ನಾಯಕರು ಹಾಗೂ ಜಿಲ್ಲಾ ಪಂಚಾಯಿತಿಯ ಅಧ್ಯಕ್ಷರಾಗಿದ್ದ ಬಬಲೇಶ್ವರ ಕ್ಷೇತ್ರದ ಉಮೇಶ ಕೋಳಕೂರ, ಇಂಡಿಯ ಸಾಲೋಟಗಿ ಜಿ.ಪಂ. ಕ್ಷೇತ್ರದ ಶಿವಯೋಗಪ್ಪ ನೇದಲಗಿ ಹಾಗೂ ಹಲಸಂಗಿ ಜಿ.ಪಂ. ಕ್ಷೇತ್ರದ ಸದಸ್ಯ ಶಿವಶರಣ ಭೈರಗೊಂಡ ಬಿಜೆಪಿ ಸೇರ್ಪಡೆಯಾಗಲಿದ್ದಾರೆ.
ಕಳೆದ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಚುನಾವಣೆಯಲ್ಲಿ ಈ ಮೂವರು ಕಾಂಗ್ರೆಸ್ ತೊರೆದು ಬಿಜೆಪಿಗೆ ಬೆಂಬಲ ನೀಡಿದ್ದರು. ಬಿಜೆಪಿಯಲ್ಲಿ ಒಳ್ಳೆಯ ಅವಕಾಶ ಕಲ್ಪಿಸುವ ಭರವಸೆಯೊಂದಿಗೆ ಇವರನ್ನು ಪಕ್ಷಕ್ಕೆ ಕರೆತರಲಾಗಿದೆ ಎಂಬ ಮಾತು ಕೇಳಿ ಬಂದಿತ್ತು. ಉಮೇಶ ಕೋಳಕೂರ ಬಬಲೇಶ್ವರ ವಿಧಾನಸಭೆ ಕ್ಷೇತ್ರದ ಪ್ರಭಾವಿ ನಾಯಕನಾದರೆ, ಶಿವಯೋಗಪ್ಪ ನೇದಲಗಿ ಇಂಡಿ ಕ್ಷೇತ್ರದಲ್ಲಿ ತಮ್ಮ ವರ್ಚಸ್ಸು ಹೆಚ್ಚಿಸಿಕೊಂಡಿದ್ದಾರೆ. ಪರ್ಯಾಯ ನಾಯಕತ್ವ ಬೆಳೆಸಲೆಂದೇ ಈ ಇಬ್ಬರಿಗೆ ಬಿಜೆಪಿ ಮಣೆ ಹಾಕಿದೆ ಎಂಬ ಮಾತಿದೆ.
ಅಪ್ಪುಗೌಡಗೆ ಮಣೆ
ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಬಸವನಬಾಗೇವಾಡಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿದ್ದ ಅಪ್ಪುಗೌಡ ಪಾಟೀಲ ಅತ್ಯಂತ ಕಡಿಮೆ ಮತಗಳ ಅಂತರದಲ್ಲಿ ಕಾಂಗ್ರೆಸ್‌ನ ಶಿವಾನಂದ ಪಾಟೀಲ ವಿರುದ್ಧ ಪರಾಭವಗೊಂಡಿದ್ದರು. ಬಿಜೆಪಿ ಅಭ್ಯರ್ಥಿ ಸಂಗರಾಜ ದೇಸಾಯಿ ತೀರ ಕಳಪೆ ಸಾಧನೆ ಮೆರೆದಿದ್ದರು. ಹೀಗಾಗಿ ಈ ಬಾರಿ ಅಪ್ಪುಗೌಡ ಪಾಟೀಲ ಅವರನ್ನು ಪಕ್ಷಕ್ಕೆ ಕರೆತರುತ್ತಿರುವುದು ಹೊಸ ಅಲೆ ಸೃಷ್ಟಿಸಿದಂತಾಗಿದೆ.
ಅಪ್ಪುಗೌಡರ ಪಕ್ಷ ಸೇರ್ಪಡೆಗೆ ಸಾಕಷ್ಟು ಅಡೆತಡೆ ಕೇಳಿ ಬಂದಿತ್ತಾದರೂ ರಾಜ್ಯ ನಾಯಕರು ಅದೆಲ್ಲದಕ್ಕೂ ತೆರೆ ಎಳೆದಿದ್ದಾರೆ. ಪಕ್ಷಕ್ಕೆ ಒಳಿತಾಗುವುದಾದರೆ ಯಾರನ್ನೂ ಬಿಡಬೇಡಿ ಎಂಬ ಸಂದೇಶ ರವಾನಿಸಿದ್ದಾಗಿ ಮೂಲಗಳು ತಿಳಿಸಿವೆ.
ಸಿಂದಗಿ ಚುನಾವಣೆಗೇನು ಲಾಭ?
ಜಾತಿ ಹಾಗೂ ಪ್ರಾದೇಶಿಕ ಲೆಕ್ಕಾಚಾರದಡಿ ನೋಡುವುದಾದರೆ ಅಪ್ಪುಗೌಡ ಪಾಟೀಲ ಹಾಗೂ ಉಮೇಶ ಕೋಳಕೂರ ಪ್ರಬಲ ಪಂಚಮಸಾಲಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಸಿಂದಗಿ ಕಾಂಗ್ರೆಸ್ ಟಿಕೆಟ್ ಪಂಚಮಸಾಲಿ ಸಮುದಾಯದ ಅಶೋಕ ಮನಗೂಳಿಗೆ ಖಚಿತವಾಗಿದೆ. ಹೀಗಾಗಿ ಆ ಸಮುದಾಯದ ಮತ ವಿಭಜನೆಗೆ ಈ ಇಬ್ಬರು ನಾಯಕರಿಗೂ ಅನುಕೂಲವಾಗುವ ಸಾಧ್ಯತೆ ಇದೆ. ಇನ್ನು ಗಾಣಿಗ ಸಮುದಾಯದ ನಾಯಕ ಶಿವಯೋಗಪ್ಪ ನೇದಲಗಿ ಆಲಮೇಲ ಸುತ್ತಲಿನ ಗ್ರಾಮಗಳಲ್ಲಿ ಸಾಕಷ್ಟು ಪ್ರಭಾವ ಹೊಂದಿದ್ದಾರೆ. ಇಲ್ಲಿನ ಹಲವು ಹಳ್ಳಿಗಳು ಹಿಂದಿನ ಇಂಡಿ ವಿಧಾನ ಸಭೆ ಕ್ಷೇತ್ರಕ್ಕೆ ಬರುತ್ತಿದ್ದವು. ಹೀಗಾಗಿ ಆ ಹಳ್ಳಿಗಳ ಮೇಲೆ ನೇದಲಗಿ ಸಾಕಷ್ಟು ಹಿಡಿತ ಹೊಂದಿದ್ದಾರೆನ್ನಲಾಗಿದೆ.
ಒಟ್ಟಿನಲ್ಲಿ ಸಿಂದಗಿ ಉಪ ಚುನಾವಣೆ ಹೊಸ್ತಿಲಿನಲ್ಲಿ ಕಾಂಗ್ರೆಸ್-ಜೆಡಿಎಸ್‌ನ ಘಟಾನುಘಟಿಗಳ ಪಕ್ಷ ಸೇರ್ಪಡೆ ಸಾಕಷ್ಟು ಕುತೂಹಲ ಮೂಡಿಸಿದ್ದು, ಈ ತಂತ್ರಗಾರಿಕೆ ಭವಿಷ್ಯದಲ್ಲಿ ಯಾವ ಫಲ ನೀಡಲಿದೆ ಎಂಬುದು ಕಾದು ನೋಡಬೇಕಿದೆ.
ಬಿಜೆಪಿ ಸೇರ್ಪಡೆಗೆ ಸಾಕಷ್ಟು ಜನ ಮುಂದೆ ಬರುತ್ತಿದ್ದಾರೆ. ಅದರಲ್ಲಿ ಸುಮಾರು 6-7 ಪ್ರಭಾವಿ ನಾಯಕರು ಶೀಘ್ರದಲ್ಲೇ ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ದಿನಾಂಕ ಕೂಡ ನಿಗದಿಯಾಗಿದೆ. ಸುದ್ದಿಗೋಷ್ಠಿ ನಡೆಸಿ ಸಮಗ್ರ ಮಾಹಿತಿ ನೀಡಲಾಗುವುದು.
ಆರ್.ಎಸ್. ಪಾಟೀಲ ಕೂಚಬಾಳ, ಬಿಜೆಪಿ ಜಿಲ್ಲಾಧ್ಯಕ್ಷ
ಬಿಜೆಪಿಯ ತತ್ವ ಸಿದ್ದಾಂತ ಮೆಚ್ಚಿ ಬೇಷರತ್ತಾಗಿ ಪಕ್ಷ ಸೇರ್ಪಡೆಯಾಗುತ್ತಿರುವೆ. ಯಾವುದೇ ಹುದ್ದೆಗೆ ಬೇಡಿಕೆ ಇರಿಸಿಲ್ಲ. ವರಿಷ್ಟರಿಂದಲೂ ಯಾವುದೇ ರೀತಿಯ ಭರವಸೆ ನಿರೀಕ್ಷಿಸಿಲ್ಲ. ಪಕ್ಷ ವಹಿಸುವ ಜವಾಬ್ದಾರಿನ್ನು ಪಾಲಿಸುತ್ತೇನೆ.
ಉಮೇಶ ಕೋಳಕೂರ, ಜಿಪಂ ಮಾಜಿ ಅಧ್ಯಕ್ಷ