ಪರಶುರಾಮ ಭಾಸಗಿ
ವಿಜಯಪುರ: ಸಿಂದಗಿ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಕಾವು ಜೋರಾಗುತ್ತಿದ್ದು, ಅಧಿಸೂಚನೆಗೆ ಮುನ್ನವೇ ಕಾಂಗ್ರೆಸ್ ‘ಆಪರೇಷನ್ ಹಸ್ತ’ಕ್ಕೆ ಮುನ್ನುಡಿ ಬರೆದಿದೆ..!
ದಿ. ಎಂ.ಸಿ. ಮನಗೂಳಿ ಅವರ ಪುತ್ರ ಅಶೋಕ ಬೇಷರತ್ತಾಗಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ನಡೆದ ಸರಳ ಸಮಾರಂಭದಲ್ಲಿ ಅಶೋಕ ಕಾಂಗ್ರೆಸ್ ಧ್ವಜ ಹಿಡಿದು ಪಕ್ಷ ಸೇರ್ಪಡೆಗೊಂಡರು.
ಆ ಮೂಲಕ ಜೆಡಿಎಸ್‌ಗೆ ಗುಡ್‌ಬೈ ಹೇಳಿದ್ದು, ತಂದೆ ದಿ. ಮನಗೂಳಿ ಅವರು ಜೆಡಿಎಸ್‌ನೊಂದಿಗೆ ಹೊಂದಿದ್ದ ನಿಷ್ಠೆ ಅವರೊಂದಿಗೆ ಅಳಿದು ಹೋದಂತಾಗಿದೆ. ಅಶೋಕ ಕಾಂಗ್ರೆಸ್ ಸೇರ್ಪಡೆಯಿಂದಾಗಿ ಜೆಡಿಎಸ್‌ಗೆ ಹಿನ್ನಡೆಯುಂಟಾಗಿದೆ.
ಟಿಕೆಟ್ ಭರವಸೆ?
ಟಿಕೆಟ್ ಭರವಸೆ ನೀಡಿ ಅಶೋಕ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡಿಲ್ಲ ಎಂಬುದು ಕೈ ನಾಯಕರ ಸ್ಪಷ್ಟನೆ. ಆದರೆ, ತಂದೆಯಿಂದ ತೆರವಾದ ಸ್ಥಾನಕ್ಕೆ ಟಿಕೆಟ್ ಭರವಸೆ ಇಲ್ಲದೆ ಅಶೋಕ ಕಾಂಗ್ರೆಸ್ ಸೇರ್ಪಡೆಯಾಗಲು ಸಾಧ್ಯವೇ? ಟಿಕೆಟ್ ಭರವಸೆ ನೀಡಿ ಎನ್ನುವುದು ಮೂಲ ಕಾರ್ಯಕರ್ತರ ಹಾಗೂ ಆಕಾಂಕ್ಷಿಗಳ ಕಣ್ಣೊರೆಸುವ ತಂತ್ರ ಎನ್ನಲಾಗಿದ್ದು, ಟಿಕೆಟ್ ಖಚಿತಪಡಿಸಿಕೊಂಡೇ ಅಶೋಕ ಕಾಂಗ್ರೆಸ್ ಧ್ವಜ ಹಿಡಿದಿದ್ದಾರೆ.
ಇನ್ನು ಅಶೋಕ ಪಕ್ಷ ಸೇರ್ಪಡೆ ವಿಚಾರ ಕುತೂಹಲದಾಯಕವೇನೂ ಅಲ್ಲ. ತಂದೆ ದಿ. ಎಂ.ಸಿ. ಮನಗೂಳಿ ಇದ್ದಾಗಲೇ ಅಶೋಕ ಕಾಂಗ್ರೆಸ್ ಸೇರ್ಪಡೆಗೆ ಒಲವು ತೋರಿದ್ದರೆನ್ನಲಾಗಿದ್ದು, ಸ್ವತಃ ಮನಗೂಳಿ ಅವರೇ ತಮ್ಮ ಪುತ್ರರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲು ಡಿ.ಕೆ. ಶಿವಕುಮಾರಗೆ ತಿಳಿಸಿದ್ದರೆಂಬ ವಿಷಯ ಇದೀಗ ಬಯಲಾಗಿದೆ. ಅಲ್ಲದೆ, ಅಶೋಕ ಅವರು ಎಚ್.ಕೆ. ಪಾಟೀಲ ಹಾಗೂ ಈಶ್ವರ ಖಂಡ್ರೆ ಜತೆ ನಿರಂತರ ಸಂಪರ್ಕದಲ್ಲಿದ್ದು ಸೂಕ್ತ ಅವಕಾಶಕ್ಕಾಗಿ ಕಾಯುತ್ತಿದ್ದರೆಂಬುದು ನಿಚ್ಚಳವಾಗಿದೆ.
ಜೆಡಿಎಸ್‌ಗೆ ಆಘಾತ
ಕಳೆದ 25 ವರ್ಷಗಳಿಂದ ಜೆಡಿಎಸ್ ಎಂದರೆ ಮನಗೂಳಿ ಕುಟುಂಬ ಎಂಬ ಮಾತಿತ್ತು. ಪಕ್ಷ ಅಧಿಕಾರದಲ್ಲಿರಲಿ, ಬಿಡಲಿ ಮನಗೂಳಿ ಕುಟುಂಬ ಮಾತ್ರ ಜೆಡಿಎಸ್ ತೊರೆಯಲ್ಲ ಎಂಬ ಮಾತಿತ್ತು. ಇದೀಗ ಎಂ.ಸಿ. ಮನಗೂಳಿ ಅವರ ಅಗಲಿಕೆಯೊಂದಿಗೆ ಆ ಮಾತು ಅಳಿದಿದೆ. ಬದಲಾದ ರಾಜಕೀಯ ಸನ್ನಿವೇಶದಿಂದ ಪುತ್ರ ಅಶೋಕ ಜೆಡಿಎಸ್ ತೊರೆದಿದ್ದು ಆ ಪಕ್ಷಕ್ಕೆ ಆಘಾತ ನೀಡಿದಂತಾಗಿದೆ. ಬೆಂಬಲಿಗರು ಹಾಗೂ ಪಕ್ಷದ ಕಾರ್ಯಕರ್ತರೊಂದಿಗೆ ಅಶೋಕ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಜೆಡಿಎಸ್‌ಗೆ ಹೊಸ ಪಡೆ ಕಟ್ಟುವ ಸವಾಲು ಎದುರಾಗಿದೆ.
ಒಟ್ಟಿನಲ್ಲಿ ಅಶೋಕ ಮನಗೂಳಿ ಕಾಂಗ್ರೆಸ್ ಸೇರ್ಪಡೆಯಿಂದ ಸಿಂದಗಿ ಉಪ ಚುನಾವಣೆ ಕಣ ರಂಗೇರಿದ್ದು, ಮುಂದಿನ ರಾಜಕೀಯ ಬದಲಾವಣೆಯತ್ತ ಜನ ಕುತೂಹಲದಿಂದ ಚಿತ್ತ ನೆಟ್ಟಿದ್ದಾರೆ.
ಹಿಂದುಳಿದ ವರ್ಗಕ್ಕೆ ಆತಂಕ?
ಅಶೋಕ ಮನಗೂಳಿ ಅವರಿಗೆ ಟಿಕೆಟ್ ಖಚಿತ ಎಂಬ ಮಾತು ಹಿಂದುಳಿದ ಸಮುದಾಯದ ಕಾಂಗ್ರೆಸ್ ನಾಯಕರಲ್ಲಿ ಆತಂಕ ಸೃಷ್ಟಿಸಿದೆ. ಸಾಮಾಜಿಕ ನ್ಯಾಯ ಪರಿಕಲ್ಪನೆಯಡಿ ಸಿಂದಗಿ ಕ್ಷೇತ್ರವನ್ನು ಹಿಂದುಳಿದ ವರ್ಗದವರಿಗೆ ಮೀಸಲಿಡುತ್ತಾ ಬರಲಾಗಿತ್ತು. ಎಲ್ಲ ಜಾತಿ ಸಮುದಾಯದವರಿಗೆ ಆದ್ಯತೆ ನೀಡಬೇಕೆಂಬ ಕಾರಣಕ್ಕೆ ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರೇ ಸಿಂದಗಿ ಕ್ಷೇತ್ರವನ್ನು ಹಿಂದುಳಿದ ವರ್ಗದವರಿಗೆ ಮೀಸಲಿರಿಸಲು ಒಲವು ತೋರುತ್ತ ಬಂದಿದ್ದರು. ನಾಗಠಾಣ ಮೀಸಲು ಕ್ಷೇತ್ರ ಬಿಟ್ಟರೆ ವಿಜಯಪುರ ನಗರ ಕ್ಷೇತ್ರ ಅಲ್ಪಸಂಖ್ಯಾತರಿಗೆ ಹಾಗೂ ಸಿಂದಗಿ ಕ್ಷೇತ್ರ ಹಿಂದುಳಿದವರಿಗೆ ಎಂಬ ಬಲವಾದ ಮಾತಿತ್ತು. ಇದೀಗ ಅಶೋಕ ಅವರ ಸೇರ್ಪಡೆಯಿಂದಾಗಿ ಹಿಂದುಳಿದವರಿಗೆ ಇದ್ದ ಒಂದು ಕ್ಷೇತ್ರವೂ ಕಳೆದುಕೊಂಡಂತಾಗಲಿದೆ ಎಂಬುದು ಆತಂಕಕ್ಕೆ ಕಾರಣ.
ವಿರೋಧಿಸಿದವರಿಗೆ ಮಣೆ
ಅಶೋಕ ಆಗಮನ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಆಕಾಂಕ್ಷಿಗಳಲ್ಲಿ ಇರಿಸು ಮುರಿಸು ಉಂಟು ಮಾಡಿರುವ ಅಂಶ ಬೆಳಕಿಗೆ ಬಂದಿದೆ. ಕಳೆದ 40 ವರ್ಷಗಳಿಂದ ಕಾಂಗ್ರೆಸ್ ವಿರೋಧಿಸಿಕೊಂಡು ಬಂದವರಿಗೆ ಮಣೆ ಹಾಕಿದ್ದು ಬೇಸರಕ್ಕೆ ಕಾರಣ ಎನ್ನಲಾಗಿದೆ. ಸದ್ಯಕ್ಕೆ ಮೂಕ ಪ್ರೇಕ್ಷಕರಾಗಿರುವ ಕಾರ್ಯಕರ್ತರು ಯಾವಾಗ ಬೇಕಾದರೂ ತಮ್ಮ ನಿಲುವು ಬದಲಿಸಬಹುದೆನ್ನಲಾಗುತ್ತಿದೆ. ಕೆಲವು ಕಾರ್ಯಕರ್ತರು ಆಗಲೇ ಕಾಂಗ್ರೆಸ್ ತೊರೆದು ಜೆಡಿಎಸ್‌ಗೆ ಸೇರಲು ಸಜ್ಜಾಗಿದ್ದರೆ ಇನ್ನೂ ಕೆಲವರು ಬಿಜೆಪಿ ಬಾಗಿಲು ತಟ್ಟಲು ತವಕಿಸುತ್ತಿರುವುದಾಗಿ ಕಾರ್ಯಕರ್ತನೋರ್ವ ಅನಿಸಿಕೆ ಹಂಚಿಕೊಂಡಿದ್ದಾನೆ.
ಅಶೋಕ ಕಾಂಗ್ರೆಸ್ ಸೇರ್ಪಡೆಯಿಂದ ಪಕ್ಷಕ್ಕೆ ಸಮಸ್ಯೆ ಇಲ್ಲ. ಸಾಕಷ್ಟು ಜನ ಟಿಕೆಟ್‌ಗಾಗಿ ಬೇಡಿಕೆ ಇರಿಸಿದ್ದಾರೆ. ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಕಣಕ್ಕಿಳಿಸಲಾಗುವುದು. ಪಕ್ಷದ ಪರ ಸಿಂದಗಿ ಜನತೆಯಲ್ಲಿ ಒಳ್ಳೆಯ ಅಭಿಪ್ರಾಯವಿದೆ.
ಮಲ್ಲಿಕಾರ್ಜುನ ಯಂಡಿಗೇರಿ, ಜೆಡಿಎಸ್ ಜಿಲ್ಲಾಧ್ಯಕ್ಷ
ಅಶೋಕ ಮನಗೂಳಿ ಬೇಷರತ್ತಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಟಿಕೆಟ್ ನೀಡುವ ಬಗ್ಗೆ ಸಮಿತಿ ನಿರ್ಧಾರ ತೆಗೆದುಕೊಳ್ಳಲಿದೆ. ಅಶೋಕ ಸಹ ಟಿಕೆಟ್ ಸಿಗಲಿ, ಬಿಡಲಿ ಪಕ್ಷ ಬಲವರ್ಧನೆಗೆ ಶ್ರಮಿಸುವುದಾಗಿ ತಿಳಿಸಿದ್ದಾರೆ. ಮಾ. 19ರಂದು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ಸೇರಿದಂತೆ ಹಲವು ನಾಯಕರು ಸಿಂದಗಿಗೆ ಭೇಟಿ ನೀಡಲಿದ್ದು, ಚುನಾವಣೆ ಕಾರ್ಯತಂತ್ರ ರೂಪಿಸಲಿದ್ದಾರೆ.
ಪ್ರೊ. ರಾಜು ಆಲಗೂರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ