ಜಿಲ್ಲೆ

ಧರ್ಮ ಸಂಸ್ಕೃತಿಯ ಪ್ರತಿಬಿಂಬ

ವಿಜಯಪುರ: ಧರ್ಮ ಸಂಸ್ಕೃತಿಯ ಪ್ರತಿಬಿಂಬ. ಆದ್ದರಿಂದ ನಮ್ಮ ಸಂಸ್ಕೃತಿಯ ಸಂಕೇತವನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಹೇಳಿದರು.
ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಸಿದ್ಧೇಶ್ವರ ಸಂಸ್ಥೆ ವತಿಯಿಂದ ಹಮ್ಮಿಕೊಂಡಿರುವ ಶ್ರೀ ಸಿದ್ಧೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ಗುರುವಾರ ಹಮ್ಮಿಕೊಂಡ ಮದ್ದು ಸುಡುವ ಕಾರ್ಯಕ್ರಮ ಹಾಗೂ ಶ್ರೀ ಸಿದ್ಧೇಶ್ವರ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಪೌರತ್ವ ತಿದ್ದುಪಡಿ ಕಾಯ್ದೆ ಈಗಾಗಲೇ ಜಾರಿಯಾಗಿದೆ. ಈ ಕಾಯ್ದೆಯ ಬಗ್ಗೆ ಯಾರಲ್ಲಿ ಅಪಕಲ್ಪನೆ ಇದೆಯೋ ಅದನ್ನು ತಿದ್ದುಕೊಳ್ಳಬೇಕು, ಪಾಕಿಸ್ತಾನ, ಅಪಘಾನಿಸ್ತಾನ ಮೊದಲಾದವುಗಳಲ್ಲಿ ಹಿಂದು ಮೊದಲಾದ ಸಮುದಾಯದವರಿಗೆ ಧಾರ್ಮಿಕ ಸ್ವಾತಂತ್ರ್ಯ ಇರಲಿಲ್ಲ, ಅವರಿಗೆ ಪೌರತ್ವ ನೀಡುವುದೇ ಈ ಕಾಯ್ದೆಯ ಉದ್ದೇಶವಾಗಿದೆ, ಈ ಕಾಯ್ದೆಯನ್ನು ವಿರೋಧಿಸುತ್ತಿರುವ ಪ್ರತಿಪಕ್ಷಗಳ ನಡೆ ಖಂಡನೀಯ ಎಂದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಕಾರ್ಯಕ್ರಮಕ್ಕೆ ಬರಲು ಉತ್ಸುಕರಾಗಿದ್ದರು, ಅನಿವಾರ್ಯ ಕಾರಣದಿಂದಾಗಿ ಅವರು ಬರಲು ಸಾಧ್ಯವಾಗಿಲ್ಲ, ಹೀಗಾಗಿ ಜಿಲ್ಲಾ ಉಸ್ತುವಾರಿ ಸಚಿವನಾಗಿ ಈ ಬಗ್ಗೆ ಕ್ಷಮೆ ಕೇಳುವೆ ಎಂದರು. 500 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿರುವ ಅಭಿವೃದ್ಧಿ ಕಾಮಗಾರಿಗಳಿಗೆ ವೇಗಗೊಳಿಸಿ ಅನುಷ್ಠಾನಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಪೌರತ್ವ ತಿದ್ದುಪಡಿ ಕಾಯ್ದೆಯಿಂದ ನಮ್ಮ ಧರ್ಮ, ನಮ್ಮ ಸಂಸ್ಕೃತಿ ಉಳಿಯಲು ಸಾಧ್ಯವಾಗಲಿದೆ. ಹೀಗಾಗಿ ಪ್ರತಿಯೊಬ್ಬರು ಈ ಕಾಯ್ದೆಯನ್ನು ಬೆಂಬಲಿಸಬೇಕು ಎಂದರು.
ಶ್ರೀ ಸಿದ್ಧೇಶ್ವರ ಸಂಸ್ಥೆ ಹಲವಾರು ಸಾಮಾಜಿಕ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಕಳೆದ ವರ್ಷ ಭಾರತೀಯ ಸಂಸ್ಕೃತಿ ಉತ್ಸವವನ್ನು ಅತ್ಯಂತ ಅರ್ಥಪೂರ್ಣವಾಗಿ ಆಯೋಜಿಸಲಾಗಿತ್ತು. ಸುಮಾರು 30 ಲಕ್ಷ ಜನರು ಕಾರ್ಯಕ್ರಮವನ್ನು ಕಣ್ತುಂಬಿಕೊಂಡಿದ್ದರು. ಜಿಲ್ಲೆಯ ಇತಿಹಾಸದಲ್ಲಿ ಭಾರತೀಯ ಸಂಸ್ಕೃತಿ ಉತ್ಸವ ಸುವರ್ಣಾಕ್ಷರದಲ್ಲಿ ಬರೆದಿಡುವ ಉತ್ಸವವಾಗಿತ್ತು ಎಂದು ಸ್ಮರಿಸಿದರು.
ಶ್ರೀಸಿದ್ಧೇಶ್ವರ ಸಂಸ್ಥೆ ವತಿಯಿಂದ ಬಡರೋಗಿಗಳ ಕಲ್ಯಾಣಕ್ಕಾಗಿ ಡಯಾಲಿಸಿಸ್ ಘಟಕ ಆರಂಭಿಸಲಾಗುತ್ತಿದ್ದು, ಜ.26 ರಂದು ಈ ಘಟಕ ಕಾರ್ಯಾರಂಭ ಮಾಡಲಿದೆ. ಮುಂದಿನ ದಿನಗಳಲ್ಲಿ ಹೈಟೆಕ್ ಆಸ್ಪತ್ರೆ ನಿರ್ಮಾಣಕ್ಕೂ ಕಾರ್ಯಯೋಜನೆ ರೂಪಿಸಲಾಗಿದೆ ಎಂದರು.
ಜಿಲ್ಲಾಕಾರಿ ವೈ.ಎಸ್. ಪಾಟೀಲ, ಎಸ್.ಪಿ. ಪ್ರಕಾಶ ನಿಕ್ಕಂ, ಸಿದ್ಧೇಶ್ವರ ಸಂಸ್ಥೆ ಚೇರ್ಮನ್ ಬಸಯ್ಯ ಹಿರೇಮಠ, ಉಪಾಧ್ಯಕ್ಷ ಸಂ.ಗು. ಸಜ್ಜನ, ಶಿವಾನಂದ ನೀಲಾ ಇತರರು ಪಾಲ್ಗೊಂಡಿದ್ದರು.

ಬಾನಂಗಳದಲ್ಲಿ ಬಣ್ಣದ ಚಿತ್ತಾರ

ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮದ್ದುಸುಡುವ ಕಾರ್ಯಕ್ರಮ ನೆರೆದಿದ್ದ ಸಾವಿರಾರು ಜನರ ಆಕರ್ಷಣೆಯಾಗಿತ್ತು. ಬಾನಂಗಳದಲ್ಲಿ ಬಣ್ಣ ಬಣ್ಣದ ಚಿತ್ತಾರದ ರೀತಿ ಕಾಣುತ್ತಿದ್ದ ಮದ್ದುಗಳನ್ನು ಕಂಡು ಜನರು ಹರ್ಷ ವ್ಯಕ್ತಪಡಿಸಿದರು. ಕೆಶಟ್ಟಿ ಹಾಗೂ ಕಲಾವಿದರು ಸಿದ್ಧಪಡಿಸಿದ ವಿಶಿಷ್ಟ ರೂಪ ಹೊಂದಿದ ಮದ್ದುಗಳು ಆಕರ್ಷಣೆಯ ಕೇಂದ್ರಬಿಂದುವಾಗಿದ್ದವು. ಬೆಳಕಿನಲ್ಲಿ ಮೂಡಿದ ಶ್ರೀಸಿದ್ಧೇಶ್ವರ ಮಂದಿರ, ಶ್ರೀಚಕ್ರ, ತ್ರಿಚಕ್ರ, ಓಂ ಬೋರ್ಡ್, ಮ್ಯಾಜಿಕ್ ಟ್ರೀ, ರೋಮನ್ ರೌಂಡ್ ಕ್ಯಾಲೆಂಡರ್, ರಾಜ ದರ್ಬಾರ್, ಸನ್ ರೈಸ್, ಸ್ವಾಗತ ಕಮಾನು, ನಯಾಗಾರಾ ಾಲ್ಸ್, ಸೂರ್ಯಚಕ್ರ, ಪೃಥ್ವಿಚಕ್ರ, ಬಿಗ್ ಪ್ಲಾವರ್ ವಿವಿಧ ಆಕೃತಿಗಳು ಎಲ್ಲರ ಗಮನ ಸೆಳೆದವು.

10 ಜನ ಸಾಧಕರಿಗೆ ಪ್ರಶಸ್ತಿ ಪ್ರದಾನ

ಪ್ರತಿ ವರ್ಷದಂತೆ ಪ್ರಸಕ್ತ ಸಾಲಿನಲ್ಲಿಯೂ ಸಿದ್ಧೇಶ್ವರ ಜಾತ್ರೆ ನಿಮಿತ್ತ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ನೀಡುವ ಸಿದ್ಧೇಶ್ವರ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸುಷ್ಮಾ ಬಿರಾದಾರ (ಶಿಕ್ಷಣ ಕ್ಷೇತ್ರ), ಎಂ.ಎಸ್.ಮದಭಾವಿ (ಸಾಹಿತ್ಯ), ಅರವಿಂದ ಮಹೇಂದ್ರಕರ ಮತ್ತು ಈಶ್ವರವ್ವ ಮಾದರ (ಕಲಾ ಕ್ಷೇತ್ರ), ಅಶೋಕ ಯಡಹಳ್ಳಿ ಮತ್ತು ದೇವೇಂದ್ರ ಹೆಳವಾರ (ಮಾಧ್ಯಮ ಕ್ಷೇತ್ರ), ಬೀರಪ್ಪ ವಗ್ಗಿ (ಕೃಷಿ ಕ್ಷೇತ್ರ), ರವೀಂದ್ರ ಬೆಳ್ಳಿ (ಕೃಷಿ ಸಂಶೋಧನಾ ಕ್ಷೇತ್ರ), ಗಿರೀಶ ಭದ್ರಗೊಂಡ (ಕೃಷಿ ಉಪಕರಣ ಸಂಶೋಧನಾ ಕ್ಷೇತ್ರ), ಅಮಲಾ ಅಂಗಡಿ (ಕ್ರೀಡಾ ಕ್ಷೇತ್ರ) ಒಟ್ಟು 10 ಜನರಿಗೆ ಶ್ರೀ ಸಿದ್ಧೇಶ್ವರ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಜಾತ್ರೆಯಲ್ಲಿಂದು

ಶ್ರೀ ಸಿದ್ಧೇಶ್ವರ ಜಾತ್ರೆ ನಿಮಿತ್ತ ಜ.17ರಂದು ಬೆಳಗ್ಗೆ 11 ಗಂಟೆಗೆ ಶ್ರೀ ಸಿದ್ದೇಶ್ವರ ದೇವಸ್ಥಾನದ ಮುಂದೆ ಭಾರ ಎತ್ತುವ ಸ್ಪರ್ಧೆ ಆಯೋಜಿಸಲಾಗಿದೆ. ಈ ಸ್ಪರ್ಧೆಯಲ್ಲಿ ಜಿಲ್ಲೆ ಅಲ್ಲದೆ ನೆರೆ ರಾಜ್ಯದ ಜಟ್ಟಿಗಳು ಪಾಲ್ಗೊಳ್ಳುತ್ತಿರುವುದು ವಿಶೇಷ.