ಜಿಲ್ಲೆ

ಪರೀಕ್ಷೆ ಮಾನದಂಡ ಪಾಲಿಸಿ

ವಿಜಯಪುರ: ಇಲಾಖೆ ನಿರ್ಧರಿಸಿದ ಮಾನದಂಡಗಳ ಮೇಲೆ ಕಟ್ಟುನಿಟ್ಟಾಗಿ ಪರೀಕ್ಷೆಗಳನ್ನು ನಡೆಸಬೇಕು. ಮುಂಜಾಗ್ರತೆ ಕ್ರಮವಾಗಿ ಮಕ್ಕಳ ಆರೋಗ್ಯ ಹಿತದೃಷ್ಟಿಯಿಂದ ಎಲ್ಲ ್ಲ ಕ್ರಮಗಳನ್ನು ಅಳವಡಿಸಿಕೊಂಡು ಕರ್ತವ್ಯ ನಿರ್ವಹಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಪ್ರಸನ್ನಕುಮಾರ ಹೇಳಿದರು.
ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಶಾರದಾ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ 2019-20 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕುರಿತು ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ವಿಜಯಪುರ ತಹಸೀಲ್ದಾರ್ ಮೋಹನಕುಮಾರಿ ಮಾತನಾಡಿ, ಪರೀಕ್ಷೆ ಕೇಂದ್ರದಲ್ಲಿ ಯಾವುದೇ ನಕಲು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಕೇಂದ್ರದ ಸುತ್ತಮುತ್ತ ಪೊಲೀಸ್ ಸಿಬ್ಬಂದಿ ನೇಮಿಸಿ, ಕೇಂದ್ರದೊಳಗೆ ಇತರು ಯಾರೂ ಪ್ರವೇಶಿಸದಂತೆ ನೋಡಿಕೊಳ್ಳಬೇಕು ಎಂದರು.
ತಾಲೂಕು ಆರೋಗ್ಯ ಅಧಿಕಾರಿ ಕವಿತಾ ಮಾತನಾಡಿ, ಮಕ್ಕಳ ಆರೋಗ್ಯದ ದೃಷ್ಟಿಯಿಂದ ಪರೀಕ್ಷೆ ಕೇಂದ್ರದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕಾೃನಿಂಗ್ ಹಾಗೂ ಕಡ್ಡಾಯವಾಗಿ ಸ್ಯಾನಿಟೈಸರ್ ಮಾಡಬೇಕೆಂದು ಹೇಳಿದರು.
ವಿಜಯಪುರ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎಸ್. ಹತ್ತಳ್ಳಿ ಮಾತನಾಡಿ, ಕೊವೀಡ್-19 ಹಿನ್ನೆಲೆಯಲ್ಲಿ ಮಕ್ಕಳ ಮನೋಬಲ ಕುಗ್ಗದಂತೆ ನೋಡಿಕೊಳ್ಳಬೇಕು. ಯಾವುದೇ ತೊಂದರೆ ಆಗದಂತೆ ಮಕ್ಕಳು ಪರೀಕ್ಷೆ ಬರೆಯುವಂತೆ ನೋಡಿಕೊಳ್ಳಬೇಕು ಎಂದರು.
ನೋಡಲ್ ಅಧಿಕಾರಿ ರವೀಂದ್ರ ಚಿಕ್ಕಮಠ ಅಗತ್ಯ ಮಾಹಿತಿಗಳನ್ನು ತಿಳಿಸಿದರು.
ಸಭೆಯಲ್ಲಿ ತಿಕೋಟಾ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಸ್. ರಾಠೋಡ, ಬಬಲೇಶ್ವರ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್. ಬಿರಾದಾರ, ಶಿಕ್ಷಣಾಧಿಕಾರಿ ಮುಜಾವರ್, ತಿಕೋಟಾ ತಾಲೂಕಿನ ಕಂದಾಯ ಇಲಾಖೆಯ ರಾಜು ಸುಣಗಾರ, ಪೊಲೀಸ್ ಇಲಾಖೆಯ ಜಿ.ಜಿ. ಬಿರಾದಾರ, ಆರೋಗ್ಯ ಇಲಾಖೆ ಅಧಿಕಾರಿ ಎಸ್.ಎಸ್. ಚಟ್ಟರ, ಎನ್.ಆರ್. ಬಾಗವಾನ್, ಸಾರಿಗೆ ಇಲಾಖೆ ಅಧಿಕಾರಿ ಎ.ಎ. ಬೋವಿ ಸೇರಿದಂತೆ ತಾಲೂಕಿನ ಎಲ್ಲ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು, ಉಪ ಅಧೀಕ್ಷಕರು, ಪ್ರಶ್ನೆ ಪತ್ರಿಕೆ ಪಾಲಕರು, ಸ್ಥಾನಿಕ ಜಾಗೃತ ಸಿಬ್ಬಂದಿ, ಮಾರ್ಗಾಧಿಕಾರಿಗಳು, ಮೊಬೈಲ್ ಸ್ವಾಧೀನಾಧಿಕಾರಿಗಳು ಹಾಗೂ ಶಿಕ್ಷಣ ಸಂಯೋಜಕರು ಉಪಸ್ಥಿತರಿದ್ದರು.

ಕೈಗವಚ ಹಸ್ತಾಂತರ

ಬಿಜೆಪಿ ಯುವಮುಖಂಡ ಉಮೇಶ ಕಾರಜೋಳ ಮಕ್ಕಳಿಗೆ 9 ಸಾವಿರ ಮಾಸ್ಕ, ಜಿಲ್ಲಾ ಸ್ಕೌಟ್ ಮತ್ತು ಗೈಡ್ಸ್‌ನವರು 6500 ಮಾಸ್ಕಗಳನ್ನು ಕೊಡುಗೆಯಾಗಿ ನೀಡಿದರು. ಪರೀಕ್ಷೆಯಲ್ಲಿ ಕಾರ್ಯನಿರತ ಸಿಬ್ಬಂದಿಗೆ ಕೋವಿಡ್-19 ಮುಂಜಾಗ್ರತೆ ಕ್ರಮವಾಗಿ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಆಡಳಿತ ಮಂಡಳಿಯೂ 1000 ಕೈಗವಚ, ಆಹೇರಿಯ ಸದ್ಗುರು ಶರಣ ಶಿಕ್ಷಣ ಸಂಸ್ಥೆ, ಶಿವಣಗಿಯ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆ, ಕಗ್ಗೋಡದ ಬಸವ ಭಾರತಿ ವಿದ್ಯಾಪೀಠ ಹಾಗೂ ವಿಶ್ವಮಾನವ ಶಿಕ್ಷಣ ಸಂಸ್ಥೆ 1600 ಕೈಗವಚವನ್ನು ಗ್ರಾಮೀಣವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎಸ್. ಹತ್ತಳ್ಳಿಯವರಿಗೆ ಹಸ್ತಾಂತರಿಸಿದರು.