ವಿಜಯಪುರ: ನಿಜವಾದ ಶಿಕ್ಷಣ ಎಂದರೆ ನಮ್ಮ ಶರೀರವನ್ನು ಪರಿಶ್ರಮದತ್ತ, ಮನಸ್ಸನ್ನು ಶ್ರದ್ಧ್ದೆಯತ್ತ ಹಾಗೂ ಬುದ್ಧಿಯನ್ನು ಜ್ಞಾನಗಳಿಕೆಯ ಮಾರ್ಗದ ಕಡೆಗೆ ಸೆಳೆಯುವಂಥದಾಗಿರಬೇಕೆಂದು ಕನ್ಹೇರಿಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಮಾತನಾಡಿದರು.
ಇಲ್ಲಿನ ಸಿಕ್ಯಾಬ್ ಸಂಸ್ಥೆಯಲ್ಲಿ ಬುಧವಾರ ನಡೆದ ‘ಯುವಜನತೆಯಲ್ಲಿ ಚಾರಿತ್ರೃ ನಿರ್ಮಾಣ ಹಾಗೂ ಮತೀಯ ಸಾಮರಸ್ಯ’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಇಂದಿನ ನಮ್ಮ ಶಿಕ್ಷಣವೂ ಕೌಟುಂಬಿಕ ಸಂಬಂಧಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಶ್ರಮರಹಿತ ಜೀವನ ಬಯಸುವಂತೆ ಮಾಡುತ್ತಿದೆ.ಬಹುತೇಕ ಜನ ಇಂದು ಅತಿಯಾದ ಲಾಲಸೆ, ಬೇಡಿಕೆಯಿಂದ ಕೂಡಿದ್ದು, ತಕ್ಷಣಕ್ಕೆ ಎಲ್ಲವೂ ದೊರಕಬೇಕು ಮತ್ತು ಸಾಧ್ಯವಾದರೆ ಮುಕ್ತವಾಗಿ ಸಿಗಬೇಕು ಎನ್ನುವ ಮನೋಭಾವ ಹೊಂದಿದ್ದಾರೆ ಎಂದರು.
ನಮ್ಮ ವ್ಯಕ್ತಿತ್ವದಲ್ಲಿ ಮಾತು-ಕೃತಿ ಎರಡೂ ಒಂದೇ ಆಗಿರಬೇಕು. ಜನ ನಮ್ಮ ಮುಂದೆ ಮತ್ತು ಹಿಂದೆ ಒಂದೇ ರೀತಿ ಮಾತನಾಡಬೇಕು. ಅಂಥ ನಿರ್ಭೀತ ನಡೆ-ನುಡಿ ನಮ್ಮದಾಗಬೇಕು. ಸಾಕ್ಷರ ವ್ಯಕ್ತಿ ಸುಶಿಕ್ಷಿತನಾಗಬೇಕು, ಸುಶಿಕ್ಷತನು ಸಾಕ್ಷರನಾಗದ್ದಿದ್ದರೂ ನಷ್ಟವಿಲ್ಲ, ಆದರೆ ಸಾಕ್ಷರ ರಾಕ್ಷಸನಾಗಬಾರದು ಎಂದು ನುಡಿದರು. ಪ್ರತಿಯೊಬ್ಬ ವಿದ್ಯಾರ್ಥಿ ತನ್ನ ಕುಟುಂಬ ಹಾಗೂ ಸಮಾಜಕ್ಕೆ ಒಂದು ಆಸ್ತಿಯಾಗಬೇಕು. ತನ್ನ ತಂದೆ ತಾಯಿಗಳು ಸಮಾಜದಲ್ಲಿ ತಲೆಎತ್ತಿ ಬದುಕುವಂತೆ ನೀತಿ-ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಮಕ್ಕಳ ಸಲುವಾಗಿ ಯಾವೊಬ್ಬ ತಂದೆ-ತಾಯಿಯೂ ಕಣ್ಣೀರು ಹಾಕಿ ಕಷ್ಟಪಡುವಂತಾಗಬಾರದು ಎಂದರು.
ಯಾವ ಭಾಷೆಯೂ ಶ್ರೇಷ್ಠ ಅಥವಾ ಕನಿಷ್ಠವಲ್ಲ. ಅದರ ಉಪಯುಕ್ತತೆಗೆ ಅನುಸಾರವಾಗಿ ಅದನ್ನು ಬಳಸಬೇಕು. ಮಾತೃಭಾಷೆಗೆ ಎಂದೆಂದೂ ಗೌರವ ಕಡಿಮೆ ಮಾಡಬಾರದು. ಇಂದಿನ ಯುವಕರು ಕೇವಲ ಮಾಹಿತಿ ಸಂಗ್ರಹದ ನಾಗಲೋಟಕ್ಕೆ ತೊಡಗಿದ್ದಾರೆ. ಆದರೆ ಮಾಹಿತಿಯನ್ನು ಜ್ಞಾನವನ್ನಾಗಿ ಪರಿವರ್ತಿಸಿ ಸ್ವಾಭಿಮಾನ ಜೀವನವನ್ನು ಮಾಡಿಕೊಳ್ಳುವ ಅವಶ್ಯಕತೆ ಇದೆ ಎಂದು ತಿಳಿಸಿದರು.
ಶಿಕ್ಷಣ ಪಡೆಯುವುದು, ಉದ್ಯೋಗ ಮಾಡುವುದು ಕೇವಲ ಹಣಗಳಿಕೆಯ ಮಾರ್ಗವಲ್ಲ. ನಮ್ಮ ಎಲ್ಲ ಧರ್ಮಗಳ, ಸಂಸ್ಕೃತಿ ಮೌಲ್ಯಗಳು ನೀತಿ-ನಿಯಮಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಅನಿವಾರ್ಯತೆ ಇದೆ ಎಂದು ತಿಳಿಸಿದರು.
ಸಿಕ್ಯಾಬ್ ಸಂಸ್ಥೆ ಸಂಸ್ಥಾಪಕ ಎಸ್.ಎ.ಪುಣೇಕರ ಅಧ್ಯಕ್ಷತೆವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಎ.ಎಸ್.ಪಾಟೀಲ, ನಿರ್ದೇಶಕರಾದ ರಿಯಾಜ್ ಾರೂಖಿ, ಸಲಾಹುದ್ದೀನ್ ಅಯೂಬಿ. ಎ.ಎಂ ಬಗಲಿ, ಪ್ರಾಚಾರ್ಯರಾದ ಎನ್.ಎಸ್.ಭೂಸನೂರ ಡಾ.ಜಾಕೀರ ಅಲಿ, ಮುಖಂಡರಾದ ಸುರೇಶ ದೇಸಾಯಿ, ಡಾ.ಪ್ರಭುಗೌಡ ಪಾಟೀಲ, ರಮೇಶ ಸೂಳಿಭಾವಿ, ಅಜಯ ಪಾಟೀಲ ಇತರರು ಉಪಸ್ಥಿತರಿದ್ದರು.