ವಿಜಯಪುರ: ಸಾಂಪ್ರದಾಯಿಕ ಕುಟುಂಬ ವ್ಯವಸ್ಥೆಯಲ್ಲಿ ಹೆಣ್ಣು ಮತ್ತು ಗಂಡಿನ ಮಧ್ಯೆ ಸಮಾನತೆಯ ಮನಸ್ಥಿತಿ ತರಲು ಪ್ರತಿಯೊಂದು ಹೆಣ್ಣು ಪ್ರಯತ್ನಿಸಬೇಕು. ಕುಟುಂಬದಿಂದಲೇ ಸಮಾನತೆಯ ಅರಿವು ಪ್ರಾರಂಭವಾಗಬೇಕು ಎಂದು ಅಕ್ಕಮಹಾದೇವಿ ವಿವಿಯ ಕುಲಸಚಿವೆ ಆರ್.ಸುನಂದಮ್ಮ ಹೇಳಿದರು.
ನಗರದ ಜಿಪಂ ಸಭಾಂಗಣದಲ್ಲಿ ಗುರುವಾರ ಹೆಣ್ಣು ಮಕ್ಕಳ ವಿಶ್ವ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಪಂ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಹೆಣ್ಣನ್ನು ರಕ್ಷಿಸಿ ಹೆಣ್ಣನ್ನು ಕಲಿಸಿ’ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಕುಟುಂಬ ವ್ಯವಸ್ಥೆಯಲ್ಲಿ ಸಮಾನತೆ ತರದೆ ಇದ್ದರೆ ಅದನ್ನು ಶಿಕ್ಷಣದಲ್ಲಿ ತರುವುದು ಸಾಧ್ಯವಿಲ್ಲ. ಆ ಕಾರಣಕ್ಕಾಗಿ ಕುಟುಂಬದಲ್ಲಿ ಸಮಾನತೆಯನ್ನು ತರಲು ನಾವು ಪ್ರಯತ್ನಿಸಬೇಕು ಎಂದರು.
ಹೆಣ್ಣಿನ ತಾರತಮ್ಯ ಜನನದಿಂದ ಪ್ರಾರಂಭವಾಗಿ ಹೆಣ್ಣುಮಕ್ಕಳ ಶಿಕ್ಷಣ, ಬದುಕನ್ನು ಕಟ್ಟುಕೊಳ್ಳುವವರೆಗೆ ಮುಂದುವರೆದಿದೆ. ಗಂಡು ಮಕ್ಕಳ ಶಿಕ್ಷಣಕ್ಕೆ ಹೋಲಿಸಿದಲ್ಲಿ ಹೆಣ್ಣು ಮಕ್ಕಳು ಉನ್ನತ ಶಿಕ್ಷಣದಿಂದ ಹೆಚ್ಚಿನ ಸಂಖ್ಯೆಯಲ್ಲಿ ವಂಚಿತರಾಗಿದ್ದಾರೆ. ಅತೀ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣಿಗೆ ಉನ್ನತ ಶಿಕ್ಷಣವನ್ನು ಪಾಲಕರು ಕಲಿಸಲು ನಿರಾಕರಿಸುವ ಉಧಾರಣೆಗಳು ಕಣ್ಣೆದುರಿಗಿವೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ ಮಾತನಾಡಿ, ಸರ್ಕಾರದಿಂದ ಸುಕನ್ಯಾ ಸಮೃದ್ಧಿ ಯೋಜನೆ, ಮಾತೃ ವಂದನ ಯೋಜನೆ, ಪೋಷಣ ಅಭಿಯಾನ ಕಾರ್ಯಕ್ರಮ, ಮಾತೃಪೂರ್ಣ ಯೋಜನೆ ಜೊತೆಗೆ ಹಲವು ಯೋಜನೆಗಳ ಬಗ್ಗೆ ಅರಿವು ಮೂಡಿಸು ಪ್ರಯತ್ನ ಮಾಡಲಾಗುತ್ತಿದೆ. ಸಮಾಜದಲ್ಲಿನ ಲಿಂಗಾನುಪಾತ ವೃದ್ಧಿ, ಮಹಿಳಾ ಮತ್ತು ಮಕ್ಕಳ ಹಕ್ಕು ಸುರಕ್ಷತೆ ಹಾಗೂ ಸಮಾನತೆಯ ನಿಟ್ಟಿನಲ್ಲಿ ಇಲಾಖೆಗಳು ಕಾರ್ಯ ನಿರ್ವಹಿಸುತ್ತಿದೆ ಎಂದರು.
ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಮಾತನಾಡಿ, ಸರ್ಕಾರ ಒಂದೊಳ್ಳೆ ಉದ್ದೇಶದಿಂದ ಜಾರಿಗೆ ತಂದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಬೇಕು. ಹೆಣ್ಣಿನ ಸಮಾನತೆಗಾಗಿ ಹಾಗೂ ಹೆಣ್ಣಿನ ಸಬಲೀಕರಣಕ್ಕಾಗಿ ಪ್ರತಿಯೊಬ್ಬರೂ ಶ್ರಮಿಸಬೇಕೆಂದರು.
ಡಿವೈಎಸ್‌ಪಿ ಲಕ್ಷ್ಮಿನಾರಾಯಣ, ಡಿಎಚ್‌ಒ ಮಹೇಂದ್ರ ಕಾಪ್ಸೆ, ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಸಿಇಒ ಗೋವಿಂದ ರೆಡ್ಡಿ, ಕಾನೂನು ಸೇವಾ ಪ್ರಾಧಿಕಾರ ಸದಸ್ಯ ವೆಂಕಣ್ಣ ಹೊಸಮನಿ ಮತ್ತಿತರರಿದ್ದರು. ನಿರ್ಮಲಾ ಸುರಪುರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಯುಪಿಎಸ್‌ಸಿ ಪರೀಕ್ಷೆಯಲ್ಲಿ 626ನೇ ರ‌್ಯಾಂಕ್ ಪಡೆದ ಸವಿತಾ ಕೋಟ್ಯಾಳ ಅವರಿಗೆ ಹಾಗೂ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದ ಯುವತಿಯರಿಗೆ ಸನ್ಮಾನಿಸಲಾಯಿತು. ಕೇಕ್ ಕತ್ತರಿಸಿ ಸಿಹಿ ಹಂಚಲಾಯಿತು.