ವಿಜಯಪುರ: ಸರ್ಕಾರದ ಪಡಿತರ ಧಾನ್ಯಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿ ವಶಕ್ಕೆ ಪಡೆದು 7.99 ಲಕ್ಷ ರೂ. ಮೌಲ್ಯದ ದಾಸ್ತಾನು ಜಪ್ತಿ ಮಾಡಲಾಗಿದೆ.
ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಬಳಿ ರಾಷ್ಟ್ರೀಯ ಹೆದ್ದಾರಿ-50 ರಲ್ಲಿ ಬುಧವಾರ ಅಕ್ರಮವಾಗಿ ಪಡಿತರ ಸಾಗಿಸುತ್ತಿದ್ದ ಲಾರಿಯನ್ನು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ವಶಕ್ಕೆ ಪಡೆಯಲಾಗಿದೆ. ಜ. 31ರಂದೇ ಈ ಘಟನೆ ನಡೆದಿದ್ದು, ಫೆ. 1 ರಂದು ಮನಗೂಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಘಟನೆ ವಿವರ:
ಬಾಗಲಕೋಟೆ ಜಿಲ್ಲೆಯ ಗದ್ದನಕೇರಿ ನಿವಾಸಿ ಸದ್ದಾಂ ಅಮೀನಸಾಬ ಜಂಗಿ (30) ಎಂಬಾತ ಪಡಿತರ ತುಂಬಿದ ಲಾರಿ ಚಲಾಯಿಸಿಕೊಂಡು ಹೋಗುತ್ತಿದ್ದನು. ಜ. 31 ರಂದು ಬೆಳಗ್ಗೆ ತಹಸೀಲ್ದಾರ್ ಮುಜಫರ್ ನಬಿಲಾಲ ಬಳಿಗಾರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಆಹಾರ ಇಲಾಖೆ ಶಿರಸ್ತೆದಾರ್ ಜೈನಬ್ಬಿ ಐ.ತುಬಾಕೆ, ಆಹಾರ ನಿರೀಕ್ಷಕ ಪುಲಿಕೇಶಿ ಮೂಕಿಹಾಳ ಮತ್ತಿತರರಿದ್ದರು.