ವಿಜಯಪುರ: ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಜ್ಯದಲ್ಲಿಯೇ ಅತೀ ಹೆಚ್ಚು ಪ್ರಮಾಣದ ತೊಗರಿ ಜಿಲ್ಲೆಯಿಂದ ಖರೀದಿಯಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ತಿಳಿಸಿದರು.
ಜಿಲ್ಲೆಯಲ್ಲಿ ನೋಂದಾಯಿಸಿಕೊಂಡ 45,843 ರೈತರ ಪೈಕಿ 39537 ರೈತರಿಂದ ಈವರೆಗೆ 6.56 ಲಕ್ಷ ಕ್ವಿಂಟಾಲ್ ತೊಗರಿ ಖರೀದಿಸಲಾಗಿದೆ. ಆ ಮೂಲಕ ವಿಜಯಪುರ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದರೆ ಕಲಬುರಗಿ ದ್ವಿತೀಯ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ 10 ತೊಗರಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, 9.02 ಲಕ್ಷ ಕ್ವಿಂಟಾಲ್ ಪ್ರಮಾಣಕ್ಕೆ 45,843 ರೈತರು ನೋಂದಣಿ ಮಾಡಿಕೊಂಡಿದ್ದಾರೆ.
ಈವರೆಗೆ ಜಿಲ್ಲೆಯಲ್ಲಿ 39,537 ರೈತರಿಂದ 6.56ಲಕ್ಷ ಕಿಂಟಾಲ್ ತೊಗರಿ ಖರೀದಿಸಲಾಗಿದ್ದು, ಪ್ರತಿ ಕ್ವಿಂಟಾಲ್ ತೊಗರಿ ಬೆಂಬಲೆ ರೂ.7550 ರಂತೆ ನಾಫೆಡ್ ಸಂಸ್ಥೆಯಿಂದ 22,030 ರೈತರಿಗೆ 270 ಕೋಟಿ ರೂ.ಗಳನ್ನು ಹಾಗೂ 450 ರೂ.ರಂತೆ ರಾಜ್ಯ ಪ್ರೋತ್ಸಾಹ ಧನವನ್ನು ರೂ.10.44 ಕೋಟಿಗಳನ್ನು 14,613 ರೈತರಿಗೆ ಡಿಬಿಟಿ ಮೂಲಕ ಜಮೆ ಮಾಡಲಾಗಿದ್ದು, ಬಾಕಿ ಉಳಿದ ರೈತರಿಗೆ ಹಂತ ಹಂತವಾಗಿ ಜಮೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ತೊಗರಿ ಖರೀದಿ ಪ್ರಕ್ರಿಯೆಯು ಮೇ 31ರವರೆಗೆ ಚಾಲ್ತಿಯಲ್ಲಿರುವುದರಿಂದ ಜಿಲ್ಲೆಯಲ್ಲಿ ತೊಗರಿ ಬೆಳೆದಿರುವ ರೈತರು ತಮ್ಮ ಸಮೀಪದ ಪಿಎಸಿಎಸ್,ಟಿಎಪಿಸಿಎಂಎಸ್, ಎಫ್‌ಪಿಒ ಸಂಘಗಳಲ್ಲಿ ತೊಗರಿ ಮಾರಾಟ ಮಾಡಿ ಬೆಂಬಲ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.