ಜಿಲ್ಲೆ

ಸರ್ಕಾರದ ಯೋಜನೆ ಸಾರ್ವಜನಿಕರಿಗೆ ತಲುಪಲಿ

ವಿಜಯಪುರ: ಸರ್ಕಾರ ಸಾರ್ವಜನಿಕರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳ ಬಗ್ಗೆ ವ್ಯಾಪಕವಾಗಿ ಅರಿವು ಮೂಡಿಸಬೇಕೆಂದು ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ನೆ.ಲ.ನರೇಂದ್ರಬಾಬು ಹೇಳಿದರು.

ನಗರದ ಸ್ಯಾಟ್‌ಲೈಟ್ ಬಸ್ ನಿಲ್ದಾಣ ಬಳಿಯ ರಾಜರಾಜೇಶ್ವರಿ ಮಂಗಲ ಕಾರ್ಯಾಲಯದಲ್ಲಿ ಗುರುವಾರ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದಿಂದ ಆಯೋಜಿಸಿದ್ದ ಜಿಲ್ಲಾ ಕಾರ್ಯಕಾರಿಣಿ ಸಭೆ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ರಾಜ್ಯದ 10 ಜಿಲ್ಲೆಗಳಲ್ಲಿ ಒಂದು ದಿನ ವಾಸ್ತವ್ಯ ಹೂಡಲಾಗಿತ್ತು. ಕಾರ್ಯಕರ್ತರ ಮನೆ ಮನೆಗೆ ಭೇಟಿಯಾಗಿ ಸರ್ಕಾರದ ಸಾಧನೆಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಅದೇ ರೀತಿ ಪಕ್ಷದ ಕಾರ್ಯಕರ್ತರು ಮನೆ ಮನೆಗೆ ತೆರಳಿ ಸರ್ಕಾರದ ಯೋಜನೆಗಳ ಬಗ್ಗೆ ಅರಿವು ಮೂಡಿಸಬೇಕು. ಅಂದಾಗ ಮಾತ್ರ ಸರ್ಕಾರದ ಉದ್ದೇಶ ಸಫಲವಾಗಲು ಸಾಧ್ಯ ಎಂದರು.

ಎಲ್ಲರನ್ನೂ ಸಮಾನಾಗಿ ತೆಗೆದುಕೊಂಡು ಹೋಗಬೇಕು. ತಳಮಟ್ಟದಿಂದ ಸಂಘಟನೆ ಗಟ್ಟಿಯಾದಾಗ ಎಲ್ಲ ವಿಭಾಗದಲ್ಲಿಯೂ ಯಶಸ್ಸು ಸಾಧಿಸಬಹುದು. ಕಾರ್ಯಕರ್ತರ ಶ್ರಮದ ಲವಾಗಿ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯ ದೊರಕುತ್ತದೆ. ಹಿಂದುಳಿದ ವರ್ಗದವರಿಗೆ ಕುಲ ಕಸುಬು ಮೂಲವಿದ್ದು, ಅತಿ ಹೆಚ್ಚು ಜನ ಅಸಂಘಟಿತ ವಲಯದಲ್ಲಿ ಇರುತ್ತಾರೆ. ಇಂತಹ ವ್ಯಕ್ತಿಗಳನ್ನು ಗುರುತಿಸಿ ಸರ್ಕಾರದ ಸವಲತ್ತುಗಳನ್ನು ಕೊಡಿಸಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರದ ಸವಲತ್ತುಗಳು ಜನಸಾಮಾನ್ಯರ ಮನೆ ಬಾಗಿಲಿಗೆ ತೆಗೆದುಕೊಂಡು ಹೋಗುವ ಕಾರ್ಯವನ್ನು ಕಾರ್ಯಕರ್ತರು ಮಾಡಬೇಕು ಎಂದರು.

ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಡಬ್ಬಿ ಮಾತನಾಡಿ, ಕಾರ್ಯಕರ್ತರು ಸಮಯಾವಕಾಶವನ್ನು ಕಲ್ಪಿಸಿಕೊಂಡು ಪ್ರತಿಯೊಂದು ಕಾರ್ಯಕ್ರಮ, ಸಭೆಯಲ್ಲಿ ಪಾಲ್ಗೊಳ್ಳಬೇಕು. ಸಂಘಟನಾತ್ಮಕವಾಗಿ ಪ್ರತಿಯೊಬ್ಬರೂ ಪ್ರತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬೇಕು. ಕೆಳ ವರ್ಗದವರ ಏಳ್ಗೆಗೆ ಪ್ರತಿಯೊಬ್ಬರೂ ಶ್ರಮಿಸಬೇಕೆಂದರು.

ದೇಶ, ರಾಜ್ಯ ಅಷ್ಟೇ ಏಕೆ ಗ್ರಾಮ ಮಟ್ಟದ ಆಡಳಿತದಲ್ಲೂ ಬಿಜೆಪಿ ಇದೆ. ನಾವು ನೀಡಿದ ಭರವಸೆಯಂತೆ ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕು. ಜನರ ಕಲ್ಯಾಣಕ್ಕಾಗಿ ಕೇಂದ್ರ, ರಾಜ್ಯ ಸರ್ಕಾರ ಹಮ್ಮಿಕೊಂಡ ಕಾರ್ಯಕ್ರಮಗಳು ಜನಸಾಮಾನ್ಯರನ್ನು ತಲುಪಬೇಕೆಂದರು.

ಜಿಲ್ಲಾ ಓಬಿಸಿ ಮೋರ್ಚಾ ಅಧ್ಯಕ್ಷ ಸಾಬು ಮಾಶ್ಯಾಳ, ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಪ್ರಕಾಶ ಅಕ್ಕಲಕೋಟ ಮಾತನಾಡಿದರು.

ಚಂದ್ರಶೇಖರ ಕವಟಗಿ, ಮಲ್ಲಿಕಾರ್ಜುನ ಜೋಗುರ, ಬಸವರಾಜ ಬಿರಾದಾರ, ವಿಡಿಎ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಶೀಲವಂತ ಉಮರಾಣಿ, ಕೃಷ್ಣಾ ಗುನ್ಹಾಳಕರ, ಮಳುಗೌಡ ಪಾಟೀಲ, ಸಂತೋಷ ವಾಗ್ಮೋರೆ, ಸದಾಶಿವ ಬುಟಾಳೆ, ರಾಹುಲ್ ಔರಂಗಬಾದ, ಮೌನೇಶ ಪತ್ತಾರ, ಸಂತೋಷ ಯಂಕಪ್ಪಗೋಳ, ಚಿನ್ನು ಚಿನಗುಂಡಿ, ವಿಜಯ ಜೋಶಿ, ಮಲ್ಲು ಮಡಿವಾಳ ಮತ್ತಿತರರಿದ್ದರು. ಪ್ರಮೋದ ಬಡಿಗೇರ ಸ್ವಾಗತಿಸಿದರು. ಶಂಕರ ಕುಂಬಾರ ನಿರೂಪಿಸಿದರು.