ವಿಜಯಪುರ: ಪ್ರಧಾನಿಗೆ ಭದ್ರತೆ ನೀಡುವಲ್ಲಿ ಲೋಪವೆಸಗಿದ ಪಂಜಾಬ್ ಸರ್ಕಾರವನ್ನು ವಜಾಗೊಳಿಸುವಂತೆ ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಗುರುವಾರ ವಿಜಯಪುರದ ಶಿವಾಜಿ ವೃತ್ತದಲ್ಲಿ ಪಂಜಿನ ಮೆರವಣಿಗೆ ನಡೆಸಿ ಪ್ರತಿಭಟಿಸಲಾಯಿತು.ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಮಾತನಾಡಿ, ಪಾಕಿಸ್ತಾನ ಗಡಿಗೆ ಹತ್ತು ಕಿಲೋ ಮೀಟರ್ ಅಂತರದಲ್ಲಿ ಭದ್ರತಾ ಲೋಪವಾಗಿರುವುದು ದುರದೃಷ್ಟಕರ ಸಂಗತಿ. ಕೂಡಲೇ ಪಂಜಾಬ್ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಬಸವರಾಜ ಹೂಗಾರ ಮಾತನಾಡಿ, ಪಂಜಾಬ್‌ನಲ್ಲಿ ನಡೆದ ಘಟನೆ ರಾಜಕೀಯ ಪ್ರೇರಿತವಾಗಿದೆ. ಆ ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರದ ವ್ಯವಸ್ಥಿತ ಸಂಚಾಗಿದೆ. ಅನೈತಿಕ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ಮುಂದಿನ ದಿನಗಳಲ್ಲಿ ದೇಶದಲ್ಲಿ ನಾಶವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ವಿಭಾಗ ಸಂಘಟನಾ ಮುಖಂಡ ಪ್ರಕಾಶ ಅಕ್ಕಲಕೋಟ ಮಾತನಾಡಿ, ಸಂಖ್ಯಾ ಬಲ ಕಳೆದುಕೊಂಡ ಕಾಂಗ್ರೆಸ್ ದಿಕ್ಕಿಲ್ಲದಂತಾಗಿ ಇಂತಹ ಕೃತ್ಯ ಮಾಡುತ್ತಿದೆ ಎಂದರು.
ಮುಖಂಡರಾದ ಬಸವರಾಜ ಬಿರಾದಾರ, ಶಿವರುದ್ರ ಬಾಗಲಕೋಟ, ಮಳುಗೌಡ ಪಾಟೀಲ, ರಾಜೇಶ ತಾವಸೆ, ಶ್ರೀಕಾಂತ ಶಿಂಧೆ, ರಾಜು ಮಗಿಮಠ, ನಿಖಿಲ್ ಚೌಧರಿ, ವಿನಾಯಕ ದಹಿಂಡೆ, ಸಂದೀಪ ಪಾಟೀಲ, ಛಾಯಾ ಮಶಿಯಣ್ಣವರ, ಭಾರತಿ ಭುಯ್ಯರ, ರಜನಿ ಸಂಬಣ್ಣಿ , ಸುರೇಶ ಬಿರಾದಾರ, ವಿಠ್ಠಲ ನಡುವಿನಕೇರಿ, ಆನಂದ ಮುಚ್ಚಂಡಿ ಇದ್ದರು.