ಜಿಲ್ಲೆ

ಜಾತಿ ಪ್ರಮಾಣ ಪತ್ರ ನೀಡಲು ಆಗ್ರಹ

Vijayapura

ವಿಜಯಪುರ: ಕೇಂದ್ರದ ಗೆಜೆಟ್ ಆಧರಿಸಿ ಎಸ್‌ಟಿ ಪ್ರಮಾಣ ಪತ್ರ ನೀಡಲು ಆಗ್ರಹಿಸಿ ತಳವಾರ ಮತ್ತು ಪರಿವಾರ ಸಮುದಾಯದಿಂದ ಗುರುವಾರ ಅಂಚೆ ಇಲಾಖೆ ಎದುರು ಪತ್ರ ಚಳವಳಿ ಹಮ್ಮಿಕೊಳ್ಳಲಾಯಿತು.

ಕೇಂದ್ರ ಸರ್ಕಾರ ತಳವಾರ ಮತ್ತು ಪರಿವಾರ ಸಮಾಜವನ್ನು ಎಸ್‌ಟಿಗೆ ಸೇರ್ಪಡೆಗೊಳಿಸಿ ಗೆಜೆಟ್ ಹೊರಡಿಸಿದೆ. ಆದರೆ, ರಾಜ್ಯ ಸರ್ಕಾರ ಅನವಶ್ಯಕವಾಗಿ ಗೊಂದಲ ಸೃಷ್ಟಿಸುವ ಮೂಲಕ ಸಮಾಜಕ್ಕೆ ಅನ್ಯಾಯ ಮಾಡುತ್ತಿದೆ. ಪರಿಣಾಮ ರಾಜ್ಯಾದ್ಯಂತ 12 ಲಕ್ಷ ತಳವಾರ ಮತ್ತು ಪರಿವಾರ ಸಮಾಜದವರು ಮೀಸಲಾತಿಯಿಂದ ವಂಚಿಗೊಳ್ಳುವಂತಾಗಿದೆ. ಜಾತಿ ಪ್ರಮಾಣ ಪತ್ರದ ವಿಳಂಬ ನೀತಿಯಲ್ಲಿ ಕೆಲ ಸಚಿವರ ಹಾಗೂ ಹಿರಿಯ ಅಧಿಕಾರಿಗಳ ಕೈವಾಡವಿದೆ ಎಂದು ಸಮಾಜದವರು ಆಪಾದಿಸಿದರು.

ಸಮಾಜ ಕಲ್ಯಾಣ ಸಚಿವರು ಯಾರದೋ ಒತ್ತಡಕ್ಕೆ ಮಣಿದು ಮಾಡುತ್ತಿರುವ ಅನ್ಯಾಯವನ್ನು ಖಂಡಿಸಿ ಈಗಾಗಲೇ ಹಂತ ಹಂತವಾಗಿ ಚಳವಳಿ ಹಮ್ಮಿಕೊಳ್ಳಲಾಗುತ್ತಿದೆ. ರಾಜ್ಯಾದ್ಯಂತ ಪ್ರತಿಭಟನೆ ಮುಂದುವರಿದರೂ ಸರ್ಕಾರ ಕಣ್ಣು ತೆರೆಯುತ್ತಿಲ್ಲ. ಹೀಗಾಗಿ ಮಾನ್ಯ ಪ್ರಧಾನಮಂತ್ರಿ ಕೂಡಲೇ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಇಲ್ಲವಾದಲ್ಲಿ 12 ಲಕ್ಷ ಸಮಾಜ ಬಾಂಧವರು ಪಕ್ಷದ ಕೈ ಬಿಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮುಖಂಡರಾದ ಸುರೇಶಗೌಡ ಪಾಟೀಲ, ಪ್ರಕಾಶ ಸೊನ್ನ, ಸಾಹೇಬಗೌಡ ಬಿರಾದಾರ, ಭರತ ಕೋಳಿ, ಶ್ರೀಮಂತ ತಳವಾರ, ಅಂಬಣ್ಣ ನಾಟಿಕಾರ, ಸದಾಶಿವ ಕೋಲಕಾರ, ನಾಗಪ್ಪ ಹೊಳೆಪ್ಪಗೋಳ, ಸಂಗಮೇಶ ಕೋಲಕಾರ, ಪಿ.ಕೆ. ಚೌದರಿ, ಗೋಪಾಲ ಮನಗೂಳಿ, ಶ್ರೀಶೈಲ ದೊಡಮನಿ, ಮಡಿವಾಳೆಪ್ಪ ವಾಲಿಕಾರ, ಮಹಾಂತೇಶ ನಾಯಕ, ಪರಶುರಾಮ ವಾಲಿಕಾರ, ಶಂಕರ ವಾಲಿಕಾರ, ಮನೋಹರ ಕತ್ನಳ್ಳಿ ಮತ್ತಿತರರಿದ್ದರು.