ಜಿಲ್ಲೆ

ವಾರದೊಳಗೆ ಆರ್ಥಿಕ ಸಮೀಕ್ಷೆ ಪೂರ್ಣ ಗೊಳಿಸಿ

ವಿಜಯಪುರ: ವಾಣಿಜ್ಯ ಮತ್ತು ವಸತಿ ಕ್ಷೇತ್ರಗಳಲ್ಲಿ ನಡೆಯುತ್ತಿರುವ ವ್ಯಾಪಾರ ಮತ್ತು ವಹಿವಾಟು ಹಾಗೂ ವಾಣಿಜ್ಯ ಉದ್ದಿಮೆಗಳ ಕುರಿತು ಸಮೀಕ್ಷೆ ಕೈಗೊಂಡು ವಾರದೊಳಗೆ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಸಾಮಾನ್ಯ ಸೇವಾ ಕೇಂದ್ರಗಳ ಪ್ರತಿನಿಧಿಗಳಿಗೆ ಸೂಚಿಸಿದರು.

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಗುರುವಾರ ತಹಸೀಲ್ದಾರ್ ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು, ಪ್ರತಿ 5 ವರ್ಷಕ್ಕೊಮ್ಮೆ ಆರ್ಥಿಕ ಗಣತಿ ಕೈಗೊಳ್ಳಲಾಗುತ್ತಿದೆ. 7 ನೇ ಆರ್ಥಿಕ ಗಣತಿ ಡಿಜಿಟಲ್ ಮೂಲಕ ಕೈಗೊಳ್ಳಲು ಸಾಮಾನ್ಯ ಸೇವಾ ಕೇಂದ್ರಕ್ಕೆ (ಸಿಎಸ್‌ಸಿ) ಜವಾಬ್ದಾರಿ ವಹಿಸಲಾಗಿದ್ದು, ವಾಣಿಜ್ಯ, ಕೃಷಿ, ಕೃಷಿಯೇತರ, ವಸತಿ ಕ್ಷೇತ್ರಗಳಲ್ಲಿ ವ್ಯಾಪಾರ ವಹಿವಾಟು ಕುರಿತು ಆರ್ಥಿಕ ಗಣತಿ ಕೈಗೊಳ್ಳಬೇಕಾಗಿದ್ದು, ಮುಂಬರುವ ಒಂದು ವಾರದಲ್ಲಿ ಜಿಲ್ಲೆಯಾದ್ಯಂತ ಆರ್ಥಿಕ ಗಣತಿ ಕೈಗೊಂಡು ಸಮೀಕ್ಷಾ ವರದಿ ಸಲ್ಲಿಸಬೇಕೆಂದರು.

ಸರ್ಕಾರದ ವಿವಿಧ ಯೋಜನೆಗಳ ಅಡಿ ಅನುದಾನ ಸೌಲಭ್ಯ ಮತ್ತು ಯೋಜನೆಯ ಸೌಲಭ್ಯ ದೊರೆಯಲು ನಿಖರ ಅಂಕಿ ಅಂಶ ಲಭ್ಯವಿರುವುದು ಅವಶ್ಯಕ. ಯಾವುದೇ ರೀತಿಯ ಲೋಪಕ್ಕೆ ಮತ್ತು ವಿಳಂಬಕ್ಕೆ ಅವಕಾಶ ನೀಡದೆ ಆರ್ಥಿಕ ಗಣತಿ ಕೈಗೊಳ್ಳುವಂತೆ ಸಾಮಾನ್ಯ ಸೇವಾ ಕೇಂದ್ರಗಳ ಪ್ರತಿನಿಧಿಗಳಿಗೆ ಸೂಚನೆ ನೀಡಿದರು.

ಅಸಂಘಟಿತ ಕ್ಷೇತ್ರದ ಚಟುವಟಿಕೆ ನಡೆಯುತ್ತಿರುವುದರಿಂದ ಕ್ಷೇತ್ರದಲ್ಲಿನ ಮಾಹಿತಿ ಪಡೆಯಲು ಮಾತ್ರ ಸಾಧ್ಯ. ವ್ಯವಸಾಯ, ಉದ್ಯಮ, ಆರ್ಥಿಕ ಗಣತಿ ದೃಷ್ಟಿಯಿಂದ ಪಶು ಪತ್ತಿನ ಉತ್ಪನ್ನ ವ್ಯವಸಾಯ ಸೇವೆಗಳು ಅರಣ್ಯ ಮೀನುಗಾರಿಕೆ ಚಟುವಟಿಕೆಯಲ್ಲಿ ಇರುವವರನ್ನು ವ್ಯವಸಾಯ ಉದ್ಯಮದವರು ಎಂದು ಕರೆಯುವರು. ವಾಣಿಜ್ಯ ಉದ್ದಿಮೆಗಳು 6ನೇ ಆರ್ಥಿಕ ಗಣತಿಯ ಸಂಖ್ಯೆಕ್ಕಿಂತ ಹೆಚ್ಚಿಸಲು ಆದೇಶಿಸಿದರು.

ಅದರಂತೆ ಜನನ-ಮರಣ ನೋಂದಣಿಯನ್ನು 21 ದಿನಗಳ ಒಳಗಾಗಿ ಆಗುವಂತೆ ನೋಡಿಕೊಳ್ಳಬೇಕು. ವರ್ಷದೊಳಗಾಗಿ ನೋಂದಣಿ ಮಾಡಿಸಿಕೊಳ್ಳಲು ಆಯಾ ತಹಸೀಲ್ದಾರರಿಗೆ ಅಧಿಕಾರ ಇರುವುದರಿಂದ ತದನಂತರ ಕೋರ್ಟ್‌ದಿಂದ ನೋಂದಣಿ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಬೇಕಾಗಿದ್ದು, ಈ ಕುರಿತು ಸೂಕ್ತಕ್ರಮ ಕೈಗೊಳ್ಳಬೇಕು. ಅದರಂತೆ ಒಂದು ವರ್ಷದ ಅವಧಿಯಲ್ಲಿ ಆದ ಜನನ ಮತ್ತು ಮರಣ ದಾಖಲೆಗಳನ್ನು ಸಮರ್ಪಕವಾಗಿ ಇಟ್ಟುಕೊಂಡು ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆಗಳಿಗೆ ದಾಖಲೆ ಸಲ್ಲಿಕೆಯಾಗುವಂತೆ ನೋಡಿಕೊಳ್ಳಲು ತಹಸೀಲ್ದಾರರಿಗೆ ಸೂಚಿಸಿದರು.

ಇ-ಜನ್ಮ ತಂತ್ರಾಂಶದಲ್ಲಿ ಪ್ರತಿ ಜನನ ಹಾಗೂ ಮರಣದ ಬಗ್ಗೆ ನೋಂದಣಿಯಾದಲ್ಲಿ ಸರ್ಕಾರದ ಯೋಜನೆಗಳ ಲಾಭ ಅರ್ಹರಿಗೆ ದೊರಕಲು ಸಹ ಸಹಕಾರಿಯಾಗಲಿದೆ. ಕಾರಣ ತಪ್ಪದೇ ನೋಂದಣಿಯಾಗುವಂತೆ ನೋಡಿಕೊಳ್ಳಬೇಕು. ಪ್ರತಿ ಮಾಹೆಯ 5ನೇ ತಾರೀಖಿನೊಳಗಾಗಿ ತಾಲೂಕುವಾರು ವರದಿ ಸಲ್ಲಿಸುವಂತೆ ಅವರು ಸೂಚನೆ ನೀಡಿದರು.

ಜಿಪಂ ಮುಖ್ಯಯೋಜನಾಧಿಕಾರಿ ಎನ್.ಕೆ. ಗೋಠೆ, ಜಂಟಿ ಕೃಷಿ ನಿರ್ದೇಶಕ ಡಿ.ಡಬ್ಲುೃ. ರಾಜಶೇಖರ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿಜಯಕುಮಾರ ಮೆಕ್ಕಳಕಿ, ಉಪವಿಭಾಗಾಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸೂರ್ಯಕಾಂತ ವಿ. ನಾವಿ ಮತ್ತಿತರರಿದ್ದರು.