ವಿಜಯಪುರ: ಅನಾದಿ ಕಾಲದಿಂದಲೂ ಈ ಜಗತ್ತು ಅನೇಕ ದಾರ್ಶನಿಕರನ್ನು ಕಂಡಿದೆ. ಸಮಯವೆಂಬ ಪ್ರವಾಹದ ಉಬ್ಬರ ಮಿಡಿತಗಳನ್ನು ಲೆಕ್ಕಿಸದೆ, ಯುಗ-ಯುಗಗಳವರೆಗೆ ಶಾಶ್ವತವಾಗಿ ನಿಲ್ಲಬಲ್ಲ ಮಹಾನ್ ಚೇತನವಾಗಿ ನಿಂತವರು ಮಹಾ ಮಾನವತಾವಾದಿ, ವಿಶ್ವಗುರು ಬಸವಣ್ಣಎಂದು ನಗರದ ಜೆಡಿಎಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಹೇಳಿದರು.
ನಗರದ ಜಾತ್ಯತೀತ ಜನತಾದಳ ಕಚೇರಿಯಲ್ಲಿ ಬಸವ ಜಯಂತಿ ಆಚರಿಸಿ ಅವರು ಮಾತನಾಡಿದರು. 12ನೇ ಶತಮಾನದಲ್ಲಿ ಧಾರ್ಮಿಕ ಅರಾಜಕತೆ, ಸಾಮಾಜಿಕ ಅಸಮತೋಲನ ಹಾಗೂ ನೈತಿಕ ಅಧಃಪತನ ಹೆಚ್ಚಾಗಿತ್ತು. ಅದನ್ನು ಸರಿಪಡಿಸಲು ಬಂದ ಮಹಾನ್ ಚೇತನ ಬಸವಣ್ಣನವರು. ತಮ್ಮ ವಚನಗಳ ಮೂಲಕ ಮಾನವಕುಲಕ್ಕೆ ಮಾರ್ಗದರ್ಶನ ಮಾಡುತ್ತ, ಒಬ್ಬ ವ್ಯಕ್ತಿ ಹಾಗೂ ಒಂದು ಸಮಾಜದ ಕಲ್ಯಾಣ, ಸಾಮಾಜಿಕ ಹಿತದೃಷ್ಟಿ ಹಾಗೂ ರಾಷ್ಟ್ರೀಯ ಭಾವ್ಯೈತೆ ಎಲ್ಲವನ್ನು ಅವರ ವಚನಗಳಲ್ಲಿ ಕಾಣಬಹುದಾಗಿದೆ ಎಂದರು.
ಎಸ್.ವೈ. ನಡುವಿನಕೆರೆ, ಎಂ.ಆರ್. ಕಬಾಡೆ, ರಾಹುಲ್ ಮಾಳದಕರ, ಮತ್ತಿತರರು ಉಪಸ್ಥಿತರಿದ್ದರು.