ವಿಜಯಪುರ: ಮನೆಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಾಲ್ವರನ್ನು ಬಂಧಿಸಿರುವ ಪೊಲೀಸರು ಅವರಿಂದ ಒಟ್ಟು 6,94,040 ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ನಗರದ ಸ್ಯಾಟ್‌ಲೈಟ್ ಬಸ್ ನಿಲ್ದಾಣದ ಶುಕ್ರವಾರ ನಸುಕಿನ ಜಾವ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿ ಕಳ್ಳತನದ ವಿವರ ಬಯಲಾಗಿದೆ. ಸ್ಥಳೀಯ ಶಿಕಾರಖಾನೆ ನಿವಾಸಿ ರಫೀಕ್ ಮಹಿಬೂಬಸಾಬ ಬೇಪಾರಿ (26), ಲಂಗರ ಬಜಾರನ ಶಾಹಿದ ಇಬ್ರಾಹಿಂ ಕಮತಗಿ (22), ಇಂಡಿ ಕರೀಮ ನಗರದ ನಿವಾಸಿ ಅಶ್ಪಾಕ ಗೋಡ್ಯಾ ಸೈಪನಸಾಬ ಶೇಖ (25) ಹಾಗೂ ವಿಜಯಪುರ ಗಾಂಧಿ ನಗರದ ನಿವಾಸಿ ಆರೀಫ್ ನೂರಸಾಬ ಕಡದೇಕರ (37) ಬಂಧಿತ ಆರೋಪಿಗಳು.
ನಗರದಲ್ಲಿ ಈಚೆಗೆ ನಡೆದ ಮನೆಗಳ್ಳತನ ಪ್ರಕರಣಗಳಲ್ಲಿ ಭಾಗವಹಿಸಿರುವುದಾಗಿ ಇವರು ಒಪ್ಪಿಕೊಂಡಿದ್ದಾರೆ. ಇವರಿಂದ 173 ಗ್ರಾಂ ಬಂಗಾರದ ಆಭರಣಗಳು ಹಾಗೂ 54 ಗ್ರಾಂ ತೂಕದ ಬೆಳ್ಳಿಯ ಆಭರಣ ಸೇರಿ ಒಟ್ಟು 6,94,040 ರೂ. ಮೌಲ್ಯದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ.
ಹೆಚ್ಚುವರಿ ಎಸ್‌ಪಿ ಡಾ.ರಾಮ್ ಅರಸಿದ್ದಿ ಹಾಗೂ ಡಿಎಸ್‌ಪಿ ಲಕ್ಷ್ಮಿನಾರಾಯಣ ಮಾರ್ಗದರ್ಶನದಲ್ಲಿ ಸಿಪಿಐ ಎಸ್.ಆರ್. ಕಾಂಬಳೆ, ರವೀಂದ್ರ ನಾಯ್ಕೋಡಿ, ಪಿಎಸ್‌ಐ ಎಸ್.ಬಿ. ಗೌಡರ ಅವರನ್ನೊಳಗೊಂಡ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು. ಪ್ರಕರಣ ಬೇಧಿಸಿದ ತಂಡಕ್ಕೆ ಬಹುಮಾನ ಘೋಷಿಸಿದ್ದಾಗಿ ಎಸ್‌ಪಿ ಅನುಪಮ ಅಗರವಾಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.