ವಿಜಯಪುರ: ಗುರುಸಾರ್ವಭೌಮರು ರಚಿಸಿದ ಅಪರೂಪದ ವಾಕ್ಯಾರ್ಥ ಗ್ರಂಥಗಳು ಜರ್ಮನಿ ದೇಶದಲ್ಲಿದ್ದು, ಅವುಗಳನ್ನು ಮರಳಿ ತರುವ ಪ್ರಯತ್ನವನ್ನು ಮಂತ್ರಾಲಯದ ಪೀಠಾಧಿಪತಿ ಸುಬುಧೇಂದ್ರತೀರ್ಥರು ಮಾಡುತ್ತಲಿರುವರು ಎಂದು ಮಂತ್ರಾಲಯದ ಪಂಡಿತ ವಿದ್ವಾನ್ ಡಾ.ಅಕ್ಕಿ ರಾಘವೇಂದ್ರ ಆಚಾರ್ಯ ಹೇಳಿದರು.
ಇಲ್ಲಿನ ನಂಜನಗೂಡು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಂಗಳವಾರ ರಾಘವೇಂದ್ರ ಸ್ವಾಮಿಗಳ 399ನೇ ಪಟ್ಟಾಭಿಷೇಕ ಮಹೋತ್ಸವದಲ್ಲಿ 5 ನೇ ಜ್ಞಾನಸತ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಘವೇಂದ್ರ ಯತಿಗಳು ರಚಿಸಿದ ಅನೇಕ ಗ್ರಂಥಗಳ ಅಧ್ಯಯನವನ್ನು ದೇಶ-ವಿದೇಶದಲ್ಲಿ ಮಾಡುತ್ತಲಿರುವರು. ಆದರೆ, ರಾಯರು ರಚಿಸಿದ ಕೆಲ ಗ್ರಂಥಗಳನ್ನು ಉಳಿಸಿಕೊಳ್ಳದಿರುವರು ನಿಜಕ್ಕೂ ದೌರ್ಭಾಗ್ಯ ಸಂಗತಿ ಎಂದು ಹೇಳಿದರು.
ಗುರುರಾಘವೇಂದ್ರರು ರಚಿಸಿದ ಗ್ರಂಥಗಳೇ ಅವರು ಮಹಿಮೆಯ ಪ್ರತೀಕ ಎಂದು ಹೇಳಿದ ಅವರು, ಜಗತ್ತನ್ನು ರಕ್ಷಣೆ ಮಾಡಲು ಅವತರಿಸಿದ ಮಹಾನುಭಾವರೇ ಗುರುಸಾರ್ವಭೌಮರು. ಅಲ್ಲದೇ ರಾಯರು ಸಂಗೀತ ಪಾರಂಗತರು. ಅವರ ಪಾಂಡಿತ್ಯ ಅಜರಾಮರ ಎಂದು ಹೇಳಿದರು.
ಶ್ರೀಮಠದ ವಿಚಾರಣಾಕರ್ತಾ ಗೋಪಾಲ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿ, ಪಂಡಿತ ವಿದ್ವಾನ್ ಡಾ.ಅಕ್ಕಿ ರಾಘವೇಂದ್ರ ಆಚಾರ್ಯರು ಇಂದಿನಿಂದ ಎಳು ದಿನ ನಿತ್ಯ ಸಂಜೆ 6.30 ರಿಂದ 7.30 ರವರೆಗೆ ರಾಘವೇಂದ್ರ ವಿಜಯ ಕುರಿತು ಪ್ರವಚನ ನೀಡಲಿದ್ದಾರೆ ಎಂದು ತಿಳಿಸಿದರು.
ಬೆಳಗ್ಗೆ ವೃಂದಾನವದ ನಿರ್ಮಾಲ್ಯ ವಿಸರ್ಜನ, ಪಂಚಾಮೃತ ಅಭಿಷೇಕ, ಅಷ್ಟೋತ್ತರ ನಡೆದವು. ಮಠದ ಪ್ರಾಂಗಣದಲ್ಲಿ ಪುಷ್ಪಗಳಿಂದ ಅಲಂಕೃತ ರಥೋತ್ಸವ ನಡೆಸಲಾಯಿತು. ಭಕ್ತ ವೃಂದದ ಭಕ್ತಿಗೀತೆಗಳ ಗಾಯನ ಮಾರ್ದನಿಸಿತು.
ಬೆಳಗ್ಗೆಯಿಂದಲೇ ನಗರದ ವಿವಿಧ ಬಡಾವಣೆಗಳಿಂದ ಭಕ್ತರು ಶ್ರೀಮಠಕ್ಕೆ ಆಗಮಿಸಿ ವೃಂದಾವನದ ದರ್ಶನ ಪಡೆದರು. ಮಠದ ಅರ್ಚಕರಾದ ರವಿ ಆಚಾರ್ಯ ಹಾಗೂ ಶ್ರೀಧರಾಚಾರ್ಯರು ವೃಂದಾವನವನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಿದ್ದರು. ಡಾ.ಅರವಿಂದ ಢಾಣಕಶಿರೂರ, ಕೆ.ಜಿ.ದೇಶಪಾಂಡೆ, ಎ.ಬಿ. ಕುಲಕರ್ಣಿ, ಶ್ರೀಕೃಷ್ಣ ಪಡಗಾನುರ, ಬಂಡಾಚಾರ್ಯ ಜೋಶಿ, ಪಂ.ಕೃಷ್ಟಾಚಾರ್ಯ ಕಾಖಂಡಕಿ, ಆರ್. ಆರ್. ಕುಲಕರ್ಣಿ, ಸಂತೋಷ ಕುಲಕರ್ಣಿ, ಮುಕುಂದ ಕುಲಕರ್ಣಿ, ಪ್ರಕಾಶ ಬಿಜಾಪುರ, ವಿಲಾಸ ಜೋಶಿ, ರಾಘಣ್ಣ ಜೋಶಿ, ವಿ.ಡಿ. ಜೋಶಿ, ಜಯತೀರ್ಥ ಕಿರಸೂರ, ನರಗುಂದಕರ, ಭೀಮಣ್ಣ ಕುಲಕರ್ಣಿ, ಗೋವಿಂದ ಸವದತ್ತಿ, ಅರುಣ ತೊರವಿ ಮುಂತಾದವರು ಭಾಗವಹಿಸಿದ್ದರು.