ಜಿಲ್ಲೆ

ಮನುಕುಲದ ಉದ್ಧಾರಕ ವಾಲ್ಮೀಕಿ

ವಿಜಯಪುರ: ಮಹರ್ಷಿ ವಾಲ್ಮೀಕಿ ಅವರು ರಾಮಾಯಣದ ಮೂಲಕ ಇಡೀ ಮನುಕುಲಕ್ಕೆ ಪ್ರೀತಿ, ನಂಬಿಕೆ, ವಿಶ್ವಾಸ, ಸೌಂದರ್ಯ ಪ್ರಜ್ಞೆ, ಬದ್ಧತೆಯಂತಹ ಆದರ್ಶ ಮೌಲ್ಯಗಳನ್ನು ನೀಡಿದ್ದಾರೆ. ಯುವಜನತೆ ಅವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಇಂಗ್ಲಿಷ್ ಶಿಕ್ಷಕ ಸಂತೋಷ ಬಂಡೆ ಹೇಳಿದರು. ತಾಲೂಕಿನ ನಾಗಠಾಣದ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹಿಂದುಳಿದ ಹಾಗೂ ಶೋಷಿತ ವರ್ಗದವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಮೂಲಕ ಅವರನ್ನು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಅಭಿವೃದ್ಧಿಗೊಳಿಸುವ ಸಲುವಾಗಿ ಮಹರ್ಷಿ ವಾಲ್ಮೀಕಿ ಅವರ ಚಿಂತನೆಗಳು ಸಹಕಾರಿಯಾಗಿವೆ ಎಂದರು. ಮುಖ್ಯ ಶಿಕ್ಷಕ ಸುರೇಶಗೌಡ ಬಿರಾದಾರ ಮಾತನಾಡಿ, ಜಗತ್ತನ್ನೇ ಮುಖ್ಯ ವಾಹಿನಿಗೆ ಕರೆತರುವ ಪ್ರಯತ್ನ ಮಾಡಿದವರು ಮಹರ್ಷಿ ವಾಲ್ಮೀಕಿ. ಅವರ ತತ್ವ-ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲನೆ ಮಾಡಿದರೆ ಉತ್ತಮ ಸಮಾಜ ನಿರ್ಮಾಣ ಮಾಡಬಹುದು ಎಂದರು. ಕಾರ್ಯದರ್ಶಿ ಸುನಂದಾ ಹುಣಶ್ಯಾಳ, ಕವಿತಾ ಗುಣಕಿ ಇತರರು ಪಾಲ್ಗೊಂಡಿದ್ದರು.

ಎಕ್ಸಲಂಟ್ ಕನ್ನಡ ಪ್ರೌಢಶಾಲೆ

ನಗರದ ಎಕ್ಸಲಂಟ್ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ವಾಲ್ಮೀಕಿ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಶಾಲೆ ಮುಖ್ಯಶಿಕ್ಷಕ ಎಂ.ಐ.ಬಿರಾದಾರ, ‘ವರ್ತನೆಯ ಪರಿವರ್ತನೆಯೇ ಶಿಕ್ಷಣ’ ಎನ್ನುವ ಸಿದ್ಧಾಂತದ ಪ್ರತ್ಯಕ್ಷ ಉದಾಹರಣೆ ವಾಲ್ಮೀಕಿ. ಸಮಾಜದ ನೀತಿ ನಿರೀಕ್ಷೆಯಂತೆ ಬದಲಿಸಿಕೊಳ್ಳುವುದೇ ಶ್ರೇಷ್ಠ ಶಿಕ್ಷಣವೆಂದು ಬದುಕಿ ತೋರಿಸಿದವರೂ ವಾಲ್ಮೀಕಿ ಅವರು. ಬದಲಾವಣೆಯು ಮನುಷ್ಯ ಬದುಕಿನಲ್ಲಿ ಜ್ಞಾನದ ಬೆಳಕನ್ನು ತರುತ್ತದೆ ಎಂಬುದನ್ನು ವಾಲ್ಮೀಕಿಯ ಜೀವನದಿಂದ ತಿಳಿಯಬಹುದು ಎಂದರು. ಐ.ಕೆ.ಬಡಿಗೇರ, ಪಿ.ಬಿ.ಕೊಳಮಲಿ, ವೀರುಪಾಕ್ಷ ಎಂಬತ್ನಾಳ, ಶೋಭಾ ಎಸ್. ಹಿರೇಮಠ, ಕಲ್ಲಪ್ಪ ಹಡಪದ ಭಾಗವಹಿಸಿದ್ದರು.

ಶಮ್ಸ್ ಪ್ರಾಥಮಿಕ ಶಾಲೆ

ನಗರದ ಶಮ್ಸ್ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆಯಲ್ಲಿ ವಾಲ್ಮೀಕಿ ಜಯಂತಿಯನ್ನು ಬಹಳವಾಗಿ ಆಚರಿಸಲಾಯಿತು. ಮುಖ್ಯ ಶಿಕ್ಷಕಿ ರೇವತಿ ಆರ್. ಕುಲಕರ್ಣಿ ಮಾತನಾಡಿ, ಕತ್ತಲೆಯಿಂದ ಬೆಳಕಿನೆಡೆಗೆ ಹೇಗೆ ವಾಲ್ಮೀಕಿ ಮಹರ್ಷಿಗಳು ಬಂದರೋ, ಅದೇ ರೀತಿ ನಮ್ಮ ಜೀವನದಲ್ಲಿ ಮಕ್ಕಳಿಗೆ ಉತ್ತಮವಾಗಿ ಕಲಿಸಿ ವಿದ್ಯಾವಂತರಾಗಿ ಒಳ್ಳೆಯ ನಾಗರಿಕರನ್ನಾಗಿಸುವುದೇ ನಮ್ಮ ಶಿಕ್ಷಕರ ಕರ್ತವ್ಯವೆಂದು ಹೇಳಿದರು. ದೈಹಿಕ ಶಿಕ್ಷಕ ರವಿಕುಮಾರ ವಾಡಕರ, ಶಾಲೆ ಶಿಕ್ಷಕ ವರ್ಗ ಇತರರು ಪಾಲ್ಗೊಂಡಿದ್ದರು.

ಶಾಂತಿನಿಕೇತನ ಶಿಕ್ಷಣ ಸಂಸ್ಥೆ

ನಗರದ ಶಾಂತಿನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನಾಚರಣೆ ಅಂಗವಾಗಿ ರಾಷ್ಟ್ರೀಯ ಏಕತಾ ದಿನಾಚರಣೆ ಮತ್ತು ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು.

ಸರ್ದಾರ್ ಪಟೇಲ್ ಮತ್ತು ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪ್ರಾಚಾರ್ಯ ಶ್ರೀಧರ ಕುರಬೇಟ ಪೂಜೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಶಿಕ್ಷಕರು ರಾಷ್ಟ್ರೀಯ ಏಕತೆಯ ಹಾಡನ್ನು ಹಾಡಿದರು ಮತ್ತು ರಾಷ್ಟ್ರೀಯ ಏಕತೆಯ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಶಿಕ್ಷಕರಾದ ಪ್ರವೀಣಕುಮಾರ ಗೆಣ್ಣೂರ, ಅನಿಲ ಬಾಗೇವಾಡಿ, ನಿಕಿತಾ, ಮಧುಮತಿ, ಶ್ರೀದೇವಿ, ಸವಿತಾ ಪಾಟೀಲ, ಸರೋಜಾ ಕರಕಳ್ಳಿ, ಇಲಿಯಾಸ್, ಎ.ಎಚ್.ಸಗರ, ಸಿದ್ದು ತೊರವಿ ಮತ್ತಿತರರು ಉಪಸ್ಥಿತರಿದ್ದರು.

ಜೆಡಿಎಸ್ ಜಿಲ್ಲಾ ಕಾರ್ಯಾಲಯ

ನಗರದ ಜೆಡಿಎಸ್ ಜಿಲ್ಲಾ ಕಾರ್ಯಾಲಯದಲ್ಲಿ ಶನಿವಾರ ವಾಲ್ಮೀಕಿ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರು ಒಬ್ಬ ಋಷಿ ಹಾಗೂ ಸಂಸ್ಕೃತಕವಿ. ರಾಮಾಯಣ ಮಹಾಕಾವ್ಯದ ಕರ್ತೃ. ಅವರನ್ನು ಆದಿಕವಿ ಎಂದು ಕರೆಯಲಾಗಿದೆ. ಪ್ರಪಂಚದ ಸಾಹಿತ್ಯ ಚರಿತ್ರೆಯಲ್ಲಿ ರಾಮಾಯಣಕ್ಕೆ ಒಂದು ವಿಶೇಷ ಸ್ಥಾನವನ್ನು ಒದಗಿಸಿದ ಶ್ರೇಯಸ್ಸು ಆದಿಕವಿ ವಾಲ್ಮೀಕಿ ಅವರಿಗೆ ಸಲ್ಲುತ್ತದೆ ಎಂದರು.

ವಾಲ್ಮೀಕಿ ಅವರನ್ನು ಸಾಧಕ ಗುಣದ ಶ್ರೇಷ್ಠ ಸಂತ ಎಂದು ಹೇಳಬಹುದು. ಅವರ ತತ್ವ ಮತ್ತು ಆದರ್ಶಗಳನ್ನು ಇಂದಿನ ರಾಜಕಾರಣಿಗಳು ಅಳವಡಿಸಿಕೊಂಡು, ಸಮಾಜಮುಖಿ ಕೆಲಸಗಳನ್ನು ಮಾಡಬೇಕು ಎಂದರು.

ಮುಖಂಡರಾದ ಕೌಸರ್ ಶೇಕ್, ದಿಲಾಲ್ ಖಾಜಿ, ಚಂದ್ರಕಾಂತ ಹಿರೇಮಠ, ಸೋಮು ಉಪ್ಪಾರ, ರಾಜು ಹಿಪ್ಪರಗಿ, ಶಿವಕಾಂತ ಕುಂಬಾರ, ಜಾರ್ ಕಲಾದಗಿ ಮುಂತಾದವರು ಉಪಸ್ಥಿತರಿದ್ದರು.