ವಿಜಯಪುರ: ಜೂಜಾಟದ ವೇಳೆ ನಡೆದ ಸಣ್ಣ ಕಲಹ ಕೊಲೆಯಲ್ಲಿ ಸಮಾಪ್ತಿಯಾಗಿದ್ದು ಪ್ರಕರಣದಲ್ಲಿ ಭಾಗಿಯಾಗಿದ್ದ 8 ಆರೋಪಿತರನ್ನು ಪೊಲೀಸರು ಹೆಡೆ ಮುರಿ ಕಟ್ಟಿ ತಂದಿದ್ದಾರೆ.
ಸತೀಶ ಊರ್ಫ್ ಠಾಕೂರ ಮೋತಿಲಾಲ ಚವಾಣ (26), ಬಸವರಾಜ ಊರ್ಫ್ ಚುಟ್ಯಾ ಶಾಂತಮಲ್ಲಪ್ಪ ಮಸಳಿ (32), ರಮೇಶ ಹಣಮಂತ ಮರಡಿ (31), ಮಹೇಶ ಕುಮಾರ ರಾಜಶೇಖರ ಹಳ್ಳದಮನಿ(25), ಜಾಕೀರ ಅಬ್ದುಲ್ ಗಾರ್ ಮಕಾನದಾರ (20), ದುಂಡಪ್ಪ ಚಂದ್ರಕಾಂತ ಬಮ್ಮನಹಳ್ಳಿ (31), ರಾಜಶೇಖರ ಮಲ್ಲಯ್ಯ ಬಳೂತಿಮಠ (28), ಪ್ರಮೋದ ಮಲ್ಲನಗೌಡ ಬಿರಾದಾರ (28) ಬಂಧಿತ ಆರೋಪಿಗಳು.
ಸ್ಥಳೀಯ ಪ್ರಭಾಕರ ನಗರ ಹತ್ತಿರದ ಸಂಸ್ಕೃತಿ ಕಾಲನಿ ಕಡೆಗೆ ಹೋಗುವ ರಸ್ತೆಯಲ್ಲಿ ಜು. 24ರಂದು ಸತೀಶ ಕಾಂತಪ್ಪ ನಾಗನೂರ ಎಂಬಾತನ ಕೊಲೆಯಾಗಿತ್ತು. ಪ್ರಮುಖ ಆರೋಪಿ ಸತೀಶ ಮೋತಿಲಾಲ ಚವಾಣ ಹಾಗೂ ಸತೀಶ ನಾಗನೂರ ಮಧ್ಯೆ ಸಣ್ಣ ಪುಟ್ಟ ಕಲಹಗಳಾಗಿದ್ದವು. ಮುಂದುವರಿದ ಭಾಗವಾಗಿ ಆರೋಪಿ ಸತೀಶ ಮತ್ತು ಕೊಲೆಗೀಡಾದ ಸತೀಶ ನಾಗನೂರ ಇಸ್ಪೀಟ್ ಆಡಲು ಹೋದ ಸಂದರ್ಭ ಆರೋಪಿ ಬಸವರಾಜ ಊರ್ಫ್ ಚುಟ್ಯಾ ಇವರ ಮಧ್ಯೆ ಕಲಹ ಉಂಟಾಗಿದೆ. ಬಳಿಕ ಚುಟ್ಯಾ ಮತ್ತಿತರ ಐವರು ಆರೋಪಿಗಳು ಡಾಬಾವೊಂದರಲ್ಲಿ ಸಭೆ ಸೇರಿ ಸತೀಶ ನಾಗನೂರ ಕೊಲೆಗೆ ಸಂಚು ರೂಪಿಸಿದ್ದರು. ಅಂದಕೊಂಡಂತೆ ಜು. 24 ರಂದು ಸಂಸ್ಕೃತಿ ಕಾಲನಿ ಬಳಿ ಸತೀಶ ನಾಗನೂರನ ಬೈಕ್ ಅಡ್ಡಗಟ್ಟಿ ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದರು.
ಈ ಬಗ್ಗೆ ಆದರ್ಶನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಸ್‌ಪಿ ಅನುಪಮ್ ಅಗರವಾಲ್ ಅವರು ಪ್ರಕರಣದ ತನಿಖೆಗೆ ವಿಶೇಷ ತಂಡ ರಚಿಸಿದ್ದರು. ಡಿಎಸ್‌ಪಿ ಕೆ.ಸಿ. ಲಕ್ಷ್ಮಿ ನಾರಾಯಣ ಮಾರ್ಗದರ್ಶನದಲ್ಲಿ ಸಿಪಿಐ ಬಿ.ಕೆ. ಮುಕರ್ತಿಹಾಳ ನೇತೃತ್ವದಲ್ಲಿ ರಚನೆಯಾದ ತಂಡ ಪ್ರಕರಣ ಆರೋಪಿಗಳನ್ನು ಪತ್ತೆ ಹಚ್ಚಿದ್ದು ಈ ತಂಡಕ್ಕೆ ವಿಶೇಷ ಬಹುಮಾನ ಘೋಷಿಸಿರುವುದಾಗಿ ಎಸ್‌ಪಿ ಅನುಪಮ್ ಅಗರವಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.