ವಿಜಯಪುರ: ಕರೊನಾದಿಂದ ಉಂಟಾಗುತ್ತಿರುವ ಸಾವಿನ ಪ್ರಮಾಣ ತಗ್ಗಿಸಲು ವಿಶೇಷ ಕಾಳಜಿ ವಹಿಸಬೇಕೆಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ವೈದ್ಯರಿಗೆ ತಿಳಿಸಿದರು.
ನಗರದ ಬಿಎಲ್ಡಿಇ ವಿಶ್ವವಿದ್ಯಾಲಯದ ಶ್ರೀ ಬಿ.ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯಕೀಯ ಶಿಕ್ಷಣ ವಿಭಾಗದಲ್ಲಿ ಬುಧವಾರ ಸರ್ಕಾರಿ ಹಾಗೂ ಖಾಸಗಿ ತಜ್ಞ ವೈದ್ಯರೊಂದಿಗೆ ತುರ್ತು ಸಭೆ ನಡೆಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಿದೆ. ರಾಜ್ಯಕ್ಕೆ ಹೋಲಿಸಿದರೆ ಜಿಲ್ಲೆ ಮುಂಚೂಣಿಯಲ್ಲಿದೆ. ಸಾವಿನ ಪ್ರಮಾಣ ತಗ್ಗಿಸಲು ವಿಶೇಷ ಗಮನ ಕೊಡಬೇಕು ಎಂದರು.
ಜಿಲ್ಲೆಯಲ್ಲಿ ದಾಖಲಾಗುವ ರೋಗಿಗಳ ಚಿಕಿತ್ಸೆ ಸೇರಿದಂತೆ ಇನ್ನಿತರ ಪರಿಶೀಲನೆಗೆ ತಜ್ಞರ ಸಮಿತಿ ಮತ್ತು ಉಪ ಸಮಿತಿಗಳ ಮೂಲಕ ಜಿಲ್ಲೆಯ ಪ್ರತಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆಗೆ ಕ್ರಮ ಕೈಗೊಳ್ಳಬೇಕು. ಸಾವು ಕುರಿತು ನಿಖರ ಅಂಕಿ-ಅಂಶಗಳನ್ನು ವರದಿ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ರಾಜ್ಯ ಆರೋಗ್ಯ ಸಚಿವರ ನಿರ್ದೇಶನ ಪಾಲಿಸಬೇಕೆಂದರು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಚಿಕಿತ್ಸೆ ಒದಗಿಸಿ ರೋಗಿಗಳನ್ನು ಗುಣಮುಖ ಪಡಿಸಬೇಕು. ರಾಜ್ಯ ಮತ್ತು ಜಿಲ್ಲೆಯ ವರದಿಯಲ್ಲಿ ವ್ಯತ್ಯಾಸ ಆಗದಂತೆ ಮುನ್ನೆಚ್ಚರಿಕೆ ವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ನೆಗಡಿ, ಕೆಮ್ಮು, ಜ್ವರ ಹಾಗೂ ಉಸಿರಾಟ ತೊಂದರೆಯಿಂದ ಬಳಲುತ್ತಿರುವವರು ಯಾವುದೇ ರೀತಿಯ ನಿರ್ಲಕ್ಷ ತೋರದೆ ತಮ್ಮ ಕುಟುಂಬಸ್ಥರ ಹಿತದೃಷ್ಟಿಯಿಂದ ತಕ್ಷಣ ಚಿಕಿತ್ಸೆಗೆ ಒಳಪಡಬೇಕು. ದೈಹಿಕವಾಗಿ ಎಷ್ಟೇ ಸದೃಢ ಇದ್ದರೂ ಇಂತಹ ಲಕ್ಷಣಗಳು ಇದ್ದಲ್ಲಿ ತಕ್ಷಣ ತಜ್ಞ ವೈದ್ಯರಲ್ಲಿ ಚಿಕಿತ್ಸೆಗೆ ಒಳಪಡಬೇಕು. ವಿದ್ಯಾರ್ಹತೆ ಇಲ್ಲದ ಮತ್ತು ಸ್ಥಳೀಯ ವೈದ್ಯರ ಬಳಿ ಹೋಗದೆ ನುರಿತ ತಜ್ಞ ವೈದ್ಯರ ಬಳಿಯೇ ಚಿಕಿತ್ಸೆ ಪಡೆಯುವಂತೆ ಸಾರ್ವಜನಿಕರಿಗೆ ಮನವರಿಕೆ ಮಾಡಬೇಕೆಂದರು.
ಚಿಕಿತ್ಸೆ ಸಂದರ್ಭ ಲೋಪ ಆಗದಂತೆ ಎಚ್ಚರಿಕೆ ವಹಿಸಬೇಕು. ರೀ ಇನ್‌ಫೆಕ್ಷನ್ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು. ಚಿಕಿತ್ಸೆಗೆ ಒಳಪಡಿಸಿದ ಸೋಂಕಿತ ರೋಗಿ ಸಂಪೂರ್ಣ ಗುಣಮುಖವಾದ ಬಗ್ಗೆ ನೆಗೆಟಿವ್ ವರದಿ ಆಧಾರದ ಮೇಲೆ ಆಸ್ಪತ್ರೆಯಿಂದ ಬಿಡುಗಡೆಗೊಳಿಸಬೇಕು. ಸಕಾಲಕ್ಕೆ ಚಿಕಿತ್ಸೆಗಾಗಿ ಆಕ್ಸಿಜನ್‌ಗಳ ಉಪಯೋಗಕ್ಕೆ ವಿಶೇಷ ಗಮನ ನೀಡುವಂತೆ ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಹೇಂದ್ರ ಕಾಪ್ಸೆ ಮಾತನಾಡಿ, ಐಸಿಯುದಲ್ಲಿರುವ ರೋಗಿಗಳ ಗಂಟಲು ದ್ರವ ಪರೀಕ್ಷೆ ಆಗಾಗ ನಡೆಸಬೇಕು. ರಕ್ತದ ಮಾದರಿ ಬಗ್ಗೆ ಗಮನ ವಹಿಸಬೇಕು. ಕರೊನಾ ಹೊರತುಪಡಿಸಿ ಇನ್ನಿತರ ಕಾರಣಗಳಿಂದ ಆಗುತ್ತಿರುವ ಸಾವು ಕುರಿತು ವಿಶೇಷ ಗಮನ ನೀಡಬೇಕು. ಆರೋಗ್ಯ ಸಚಿವರ ನಿರ್ದೇಶನದ ಹಿನ್ನೆಲೆಯಲ್ಲಿ ಸಾವು ಪ್ರಮಾಣ ತಗ್ಗಿಸಲು ಪ್ರಯತ್ನಿಸಬೇಕು ಎಂದರು.
ಬಿಎಲ್ಡಿಇ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಎಂ.ಎಸ್. ಬಿರಾದಾರ, ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಅರವಿಂದ ಪಾಟೀಲ, ವೈದ್ಯಕೀಯ ಅಧೀಕ್ಷಕ ಡಾ. ಆರ್.ಎಂ. ಹೊನ್ನುಟಗಿ, ಜಿಲ್ಲಾಸ್ಪತ್ರೆ ಸರ್ಜನ್ ಡಾ. ಶರಣಪ್ಪ ಕಟ್ಟಿ, ಡಾ. ಲಕ್ಕಣ್ಣವರ, ಡಾ. ಸಂಪತ್‌ಕುಮಾರ ಗುಣಾರೆ ಮತ್ತಿತರರಿದ್ದರು.