ಜಿಲ್ಲೆ

ಮನೆ ಬಾಗಿಲಿಗೆ ದಿನಸಿ ಸ್ಲೈ..!

Vijayapura

ವಿಜಯಪುರ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಮನೆಯಿಂದ ಹೊರ ಬರಲು ಜನರು ಹಿಂದೇಟು ಹಾಕುವಂತಾಗಿದೆ. ಅಲ್ಲದೆ ವಿಜಯಪುರ ಜಿಲ್ಲೆಯಲ್ಲಿ ದಿನೇ ದಿನೆ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ. ಈ ನಡುವೆಯೂ ಕಿರಾಣಿ ಅಂಗಡಿ ಮಾಲೀಕನೊಬ್ಬ ಮನೆ ಮನೆಗೆ ದಿನಸಿ ವಸ್ತುಗಳನ್ನು ಪೂರೈಸುವ ಕಾರ್ಯದಲ್ಲಿ ಮಗ್ನನಾಗಿರುವುದು ಬೆಳಕಿಗೆ ಬಂದಿದೆ.
ಪ್ಲಾಸ್ಟಿಕ್ ಅಂಗಡಿಯನ್ನು ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ ಮಂಜುನಾಥ ಪಲ್ಲೇದ ಎಂಬುವವರು ಸುಪ್ರೀಂ ಕೋರ್ಟ್ ಪ್ಲಾಸ್ಟಿಕ್ ನಿಷೇಧಕ್ಕೆ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ಅಂಗಡಿಯನ್ನು ಮುಚ್ಚುವಂತಾಯಿತು. ಅದಕ್ಕೆ ಎದೆಗುಂದದೆ ಮತ್ತೆ ದಿನಸಿ ಅಂಗಡಿ ಪ್ರಾರಂಭಿಸಿ, ಅದರಲ್ಲಿ ಜೀವನ ಕಂಡು ಕೊಂಡಿದ್ದಾರೆ.

ಉಚಿತ ಹೋಮ್ ಡೆಲಿವರಿ

ವಿಜಯಪುರ ನಗರ ವ್ಯಾಪ್ತಿಯಲ್ಲಿ ಬರುವ ಎಲ್ಲ ಬಡಾವಣೆಗಳ ಜನತೆ ಮನೆ ಬಾಗಿಲಿಗೆ ಎಲ್ಲ ರೀತಿಯ ಕಿರಾಣಿ ಸಾಮಗ್ರಿಗಳನ್ನು ಉಚಿತ ಹೋಮ್ ಡೆಲಿವರಿ ಮೂಲಕ ತಲುಪಿಸುವ ಕಾರ್ಯವನ್ನು ಮಂಜುನಾಥ ಅವರು ಮಾಡುತ್ತಿದ್ದಾರೆ. ಪ್ರತಿ ದಿನಸಿ ಪದಾರ್ಥಗಳಿಗೆ ನಿಗದಿತ ದರದಂತೆ ಮನೆಗೆ ತಲುಪಿಸುತ್ತಿದ್ದಾರೆ. ಅದಕ್ಕೆ ಯಾವುದೇ ರೀತಿಯ ಶುಲ್ಕವನ್ನು ಪಾವತಿಸ ಬೇಕಿಲ್ಲ. ಇದರಿಂದ ಜಿಲ್ಲಾಡಳಿತದ ಕೆಲಸವನ್ನು ಈತ ಸರಳಗೊಳಿಸುತ್ತಿರುವುದು ಮೆಚ್ಚುಗೆ ವ್ಯಕ್ತವಾಗುತ್ತಿದೆ.

ದಿನಸಿ ದರ ಎಷ್ಟೆಷ್ಟು ?

ತೊಗರಿ ಬೇಳೆ ಕೆಜಿಗೆ 100 ರೂ., ಹೆಸರು ಬೇಳೆ 130, ಉದ್ದಿನ ಬೇಳೆ 110, ಕಡಲೆ ಬೇಳೆ 70 ರೂ., ಇಡ್ಲಿ ರವಾ 30 ರೂ., ಅಡುಗೆ ಎಣ್ಣೆ (ಜೆಮಿನಿ) 115 ರೂ., ಪಾಮ್ ಎಣ್ಣೆ 90 ರೂ., ಸಕ್ಕರೆ 36 ರೂ. ಹೀಗೆ ಇನ್ನಿತರ ದಿನಸಿ ಸಾಮಗ್ರಿಗಳನ್ನು ಜಿಲ್ಲಾಡಳಿತ ನಿಗದಿ ಪಡಿಸಿದ ದರದಲ್ಲಿ ಮಾರಾಟ ಮಾಡಲಾಗುತ್ತಿದ್ದು, ಜನರಿಂದ ಭರ್ಜರಿ ಬೇಡಿಕೆ ಬರುತ್ತಿದ್ದು, ಮನೆ ಮನೆಗೆ ದಿನಸಿ ಪೂರೈಸುತ್ತಿದ್ದಾರೆ.

ಬರುವ ಆದಾಯ ಪರಿಹಾರ ನಿಧಿಗೆ

ದಿನಸಿ ಪದಾರ್ಥ ಮಾರಾಟದಿಂದ ಬರುವ ಆದಾಯವನ್ನು ಸಂಪೂರ್ಣ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುವುದಾಗಿ ಮಂಜುನಾಥ ಪಲ್ಲೇದ ಹೇಳುತ್ತಾರೆ. ಈಗಾಗಲೇ 40 ಮನೆಗಳಿಗೆ ದಿನಸಿ ಸಾಮಗ್ರಿಗಳನ್ನು ಪೂರೈಸಲಾಗಿದೆ. ಗ್ರಾಹಕರು ಅಗತ್ಯ ದಿನಸಿ ಪದಾರ್ಥಗಳ ಪಟ್ಟಿ ಹಾಗೂ ಅವರ ವಿಳಾಸವನ್ನು ವಾಟ್ಸ್‌ಅಪ್ ಮೂಲಕ ಕಳುಹಿಸುತ್ತಾರೆ. ಆ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ಹೋಗಿ ದಿನಸಿ ಪೂರೈಸಲಾಗುವುದು ಎನ್ನುತ್ತಾರೆ.

ಕರೊನಾ ಮಹಾಮಾರಿ ತಡೆಗಟ್ಟಲು ಎಲ್ಲರೂ ಮನೆಯಲ್ಲಿರುವ ಅನಿವಾರ್ಯ ಬಂದಿದೆ. ಹಾಗಾಗಿ ಗ್ರಾಹಕರಿಗೆ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಅಗತ್ಯ ವಸ್ತುಗಳ ಖರೀದಿಸುವವರ ವಾಟ್ಸ್‌ಅಪ್ ನಂ.7795305675 ಗೆ ಸಂಪರ್ಕಿಸಬಹುದು. ಮಂಜುನಾಥ ಪಲ್ಲೇದ, ದಿನಸಿ ಅಂಗಡಿ ಮಾಲೀಕ