ಜಿಲ್ಲೆ

ಯುವ ಕಲಾವಿದರಿಗೆ ಆರ್ಥಿಕ ನೆರವು ನೀಡಿ

ವಿಜಯಪುರ: ಲಾಕ್‌ಡೌನ್ ಹಿನ್ನೆಲೆ ಸಂಕಷ್ಟಕ್ಕೀಡಾಗಿರುವ ಯುವ ಕಲಾವಿದರಿಗೆ ಆರ್ಥಿಕ ನೆರವು ನೀಡಲು ಆಗ್ರಹಿಸಿ ಅಖಿಲ ಕರ್ನಾಟಕ ವೃತ್ತಿ ರಂಗಭೂಮಿ ಕಲಾವಿದರ ಸಂಘದ ಯೋಗಾಪುರದ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಡಳಿತ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಮುಖಂಡ ಫಯಾಜ ಕರ್ಜಗಿ ಮಾತನಾಡಿ, ಪ್ರಸ್ತುತ ರಾಜ್ಯಾದಂತ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಇದರಿಂದ ಯುವ ಕಲಾವಿದರು ಉದ್ಯೋಗ ಕಳೆದುಕೊಂಡಿದ್ದಾರೆ. ರಾಜ್ಯ ಸರ್ಕಾರ ಸಂಕಷ್ಟದಲ್ಲಿರುವ ಕಲಾವಿದರಿಗೆ ವಿಶೇಷ ಪ್ಯಾಕೇಜ್ ಘೋಷಿಸಿದೆ.

ರಾಜ್ಯದಲ್ಲಿರುವ 16095 ಕಲಾವಿದರಿಗಾಗಿ ತಲಾ 3000ಸಾವಿರ ರೂ.ಗಳಂತೆ 4.82 ಕೋಟಿ ರೂ.ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಇದು ರಂಗಭೂಮಿ ಕಲಾವಿದರಿಗೆ ನಿಜಕ್ಕೂ ಸಂತಸದ ವಿಚಾರ. ಆದರೆ, ಈ ನೆರವು ಪಡೆಯಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ 14 ನಿಯಮಗಳನ್ನು ಹೇರಿದೆ. ಅದರಲ್ಲಿ ಕೆಲವು ನಿಯಮಗಳು ಕಲಾವಿದರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿವೆ. ಈ ಯೋಜನೆಯಲ್ಲಿ ಧನ ಸಹಾಯ ಪಡೆಯಲು ಕನಿಷ್ಠ 35 ವರ್ಷ ಮೇಲ್ಪಟ್ಟಿರಬೇಕು ಹಾಗೂ 10 ವರ್ಷಗಳ ಸೇವೆ ಸಲ್ಲಿಸಿರಬೇಕು ಅನ್ನುವ ನಿಯಮಗಳಿವೆ. ಇನ್ನು ಈ ಸೇವೆಯ ಅರ್ಜಿಯನ್ನು ಸೇವಾ ಸಿಂಧು ಪೋರ್ಟಲ್ ಮೂಲಕ ಸಲ್ಲಿಸಲು ಅವಕಾಶ ನೀಡಲಾಗಿದೆ. ಲಾಕ್‌ಡೌನ್‌ದಿಂದಾಗಿ ಕಲಾವಿದರು ಸೇವಾ ಸಿಂಧು ಮುಖಾಂತರ ಅರ್ಜಿ ಸಲ್ಲಿಸಲು ಆಗುತ್ತಿಲ್ಲ. ಮೊಬೈಲ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಲು ಕಲಾವಿದರಿಗೆ ಅಷ್ಟೊಂದು ಮಾಹಿತಿ ಇರುವುದಿಲ್ಲ. ಹೀಗಾಗಿ ಸಹಾಯ ಧನ ಪಡೆಯಲು ಕಲಾವಿದರಿಗೆ ಸೂಕ್ತ ಮಾರ್ಗ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಅಲ್ಲದೆ, 35 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸಾವಿರಾರು ಕಲಾವಿದರು ರಾಜ್ಯದಲ್ಲಿ ಇದ್ದಾರೆ. ಅದರಲ್ಲಿ ಉತ್ತರ ಕರ್ನಾಟಕ ಭಾಗದ ಮತ್ತು ಆಯಾ ಸೊಗಡಿನ ಸ್ಥಳಕ್ಕೆ ಅನುಗುಣವಾದ ಯುವ ಕಲಾವಿದರು ಪ್ರತಿ ಜಿಲ್ಲೆಯಲ್ಲಿ ರಂಗಭೂಮಿಯನ್ನೆ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಅವರೆಲ್ಲರಿಗೂ ಸಹಾಯ ಧನ ಸಿಗಬೇಕು ಎಂದು ಆಗ್ರಹಿಸಿದರು.

ಕಲಾವಿದರಾದ ಪಿಂಟು ಕರ್ಜಗಿ, ಅವಿನಾಶ ಅಕ್ಕಲಕೋಟಿ, ಹರೀಶ ಹಿರಿಯೂರ, ಮಾರುತಿ ಉಡುಪಿ, ವಿರೇಶ ಪಾಟೀಲ, ಪಂಚಾಕ್ಷರಿ ಇಟಗಿ ಮತ್ತಿತರರಿದ್ದರು.