ಜಿಲ್ಲೆ

ದೇವದಾಸಿಯರ ಮಕ್ಕಳು ಶಿಕ್ಷಣವಂತರಾಗಲಿ

ವಿಜಯಪುರ: ಸರ್ಕಾರ ದೇವದಾಸಿಯರು ಹಾಗೂ ಅವರ ಮಕ್ಕಳ ಬದುಕನ್ನು ಹಸನಾಗಿಸುವ ನಿಟ್ಟಿನಲ್ಲಿ ಹತ್ತಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ಈ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವೆಂಕಣ್ಣ ಹೊಸಮನಿ ಹೇಳಿದರು.

ನಗರದ ಜಿಪಂ ಸಭಾ ಭವನದಲ್ಲಿ ಬುಧವಾರ ಮಾನವ ಕಳ್ಳ ಸಾಗಣೆಯಲ್ಲಿ ನೊಂದವರು ಮತ್ತು ವಾಣಿಜ್ಯ ಲೈಂಗಿಕ ಶೋಷಣೆ, ಮಕ್ಕಳ ಮೇಲಿನ ದೌರ್ಜನ್ಯ ತಡೆ ಮತ್ತು ದೇವದಾಸಿ ಪದ್ಧತಿ ನಿಷೇಧ ಕುರಿತು ಜಿಲ್ಲಾ ವಕೀಲರ ಸಂಘ, ಜಿಲ್ಲಾ ಪಂಚಾಯಿತಿ ಹಾಗೂ ಸಂಬಂಧಿಸಿದ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇವದಾಸಿಯರು ಸರ್ಕಾರದ ಪಿಂಚಣಿ ಹಾಗೂ ಇನ್ನಿತರ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಸುಂದರ ಬದುಕು ಕಟ್ಟಿಕೊಳ್ಳಬೇಕು. ದೇವದಾಸಿಯರ ಮಕ್ಕಳು ಕೂಡ ವಿದ್ಯಾವಂತರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಅದರಂತೆ ಕಾನೂನು ಸೇವಾ ಪ್ರಾಧಿಕಾರದಿಂದಲೂ ಲೈಂಗಿಕ ಶೋಷಿತರ ದೂರು ದುಮ್ಮಾನಗಳನ್ನು ಆಲಿಸಿ, ಪರಿಶೀಲಿಸಿ ಅವರಿಗೆ ಅಗತ್ಯ ಹಾಗೂ ಉಚಿತ ಕಾನೂನು ಸೇವೆಯನ್ನೂ ಒದಗಿಸಲಾಗುವುದು ಎಂದರು.

ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಂ.ಎಸ್. ಕಾಸನೀಸ್, ಅಧಿಕಾರಿ ಕೆ.ಕೆ. ಚವ್ಹಾಣ್, ಆರ್.ಎ. ಕೊಕಟನೂರ, ರೇಣುಕಾ ಯಂಬತ್ನಾಳ, ಬಸವರಾಜ ಹುಲಗನ್ನವರ, ಶಾಂತಾ ಬೇಲಾಳ, ಮಹಾದೇವಿ ಹುಲ್ಲೂರ ಮತ್ತಿತರರಿದ್ದರು.