ಜಿಲ್ಲೆ

ಕುರುಬರಿಗೆ ಎಸ್‌ಟಿ ಮೀಸಲಾತಿಗೆ ಒತ್ತಾಯ

ವಿಜಯಪುರ: ರಾಜ್ಯದ ಕುರುಬ ಸಮಾಜದವರಿಗೆ ಪರಿಶಿಷ್ಟ ಪಂಗಡ (ಎಸ್‌ಟಿ) ಮೀಸಲಾತಿ ಸೌಲಭ್ಯ ನೀಡಬೇಕು ಎಂದು ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಒತ್ತಾಯಿಸಿದರು.

ನಗರದ ಶಿಕಾರಖಾನೆ ಬಡಾವಣೆಯ ಸಿದ್ರಾಮೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ನಡೆದ ಕುರುಬ ಸಮಾಜದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸಿದ್ದರಾಮಯ್ಯ ಮತ್ತು ಈಶ್ವರಪ್ಪ ಅವರು ಎಸ್‌ಟಿ ಮೀಸಲಾತಿಗಾಗಿ ಹೋರಾಟದ ಮಾಡಲು ಸ್ವಾಮೀಜಿಗಳ ನೇತೃತ್ವದಲ್ಲಿ ಮುಂದಾಳತ್ವ ವಹಿಸಿಕೊಂಡಿದ್ದಾರೆ. ಅ.11ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕುರುಬರ ಎಸ್‌ಟಿ ಮೀಸಲಾತಿ ಹೋರಾಟ ಕುರಿತು ಸಭೆ ನಡೆಯಲಿದೆ ಎಂದರು.

ಮಖಣಾಪುರದ ಗುರುಪೀಠದ ಸೋಮೇಶ್ವರ ಸ್ವಾಮೀಜಿ ಮಾತನಾಡಿ, ಯಾವುದೇ ಹಕ್ಕುಗಳು ತನ್ನಿಂದ ತಾನೇ ಬರುವುದಿಲ್ಲ. ಅದಕ್ಕೆ ಹೋರಾಟ, ರಾಜಕೀಯ ಬದ್ಧತೆ, ಸಾಮಾಜಿಕ ಬದ್ಧತೆ ಇದ್ದರೆ ಮಾತ್ರ ಪಡೆಯಬಹುದಾಗಿದೆ ಎಂದು ತಿಳಿಸಿದರು.

ಕರ್ನಾಟಕ ಪ್ರದೇಶದ ಕುರುಬರ ಸಂಘದ ರಾಜ್ಯ ಸಹ ಕಾರ್ಯದರ್ಶಿ ರವಿ ಕಿತ್ತೂರ ಮಾತನಾಡಿ, ಕುರುಬ ಸಮಾಜ ನೂರಾರು ವರ್ಷದಿಂದ ಎಸ್‌ಟಿ ಮೀಸಲಾತಿ ಪಡೆಯಲು ಹೋರಾಟ ನಡೆಸಿದರೂ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಮತ್ತು ಸಂಘಟನೆ ಕೊರತೆಯಿಂದ ಇಲ್ಲಿಯವರೆಗೆ ಮೀಸಲಾತಿ ಪಡೆಯುವಲ್ಲಿ ವಂಚಿತರಾಗಿದ್ದೇವೆ. ಈಗ ಸದಾವಕಾಶ ಕೂಡಿ ಬಂದಿದ್ದು, ರಾಜ್ಯದ ಎಲ್ಲ ಪೂಜ್ಯರು, ಪಕ್ಷಾತೀತವಾಗಿ ರಾಜಕೀಯ ಮುಖಂಡರು ಒಂದೇ ವೇದಿಕೆಯಲ್ಲಿ ಹೋರಾಟದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ಎಲ್ಲ ಜಿಲ್ಲೆಗಳಿಂದ ಅಭೂತಪೂರ್ವ ಬೆಂಬಲ ದೊರಕಿದ್ದು, ಜಿಲ್ಲೆಯಲ್ಲಿಯೂ ಹೋರಾಟಕ್ಕೆ ಬೆಂಬಲಿಸಬೇಕು ಎಂದರು.

ಎಸ್‌ಟಿ ಮೀಸಲಾತಿ ಸಮಿತಿಯ ರಾಜ್ಯ ಸಹ ಕಾರ್ಯದರ್ಶಿ ರಾಜು ಬಿರಾದಾರ, ಸಮಾಜದ ಮುಖಂಡರಾದ ಬಿ.ಡಿ.ಪಾಟೀಲ, ರಾಜಶೇಖರ ಕುರಿಯವರ, ಕರೆಪ್ಪ ಬಸ್ತಾಳ, ಎಸ್.ಟಿ.ಬಿಂಜಲಬಾವಿ, ಸಿದ್ದು ಬೆಳಗಾವಿ, ಎಲ್.ಕೆ.ಬಿರಾದಾರ, ಬಸವರಾಜ ಹೊನವಾಡ, ಮೋಹನ ಮೇಟಿ, ನಿಂಗಣ್ಣ ಗೊಬ್ಬೂರ, ಕಾಶೀನಾಥ ಪಡದಳ್ಳಿ, ಶಂಕರಲಿಂಗ ಕೆಂಚಗೊಂಡ, ಕಲ್ಲಪ್ಪ ಇಂಡಿ, ನಿಂಗಪ್ಪ ಪೂಜಾರಿ ಇತರರಿದ್ದರು.