ವಿಜಯಪುರ: ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷಾ ಪರಂಪರೆಯನ್ನು ಉಳಿಸಿಕೊಂಡು ಹೋಗುವ ಮಹತ್ತರ ಜವಾಬ್ದಾರಿಯನ್ನು ಕನ್ನಡ ಸಾಹಿತ್ಯ ಪರಿಷತ್ ನಿಭಾಯಿಸಿಕೊಂಡು ಹೊರಟಿದೆ ಎಂದು ಚಡಚಣ ವಿರಕ್ತ ಮಠದ ಷಡಕ್ಷರಿ ಸ್ವಾಮಿಗಳು ಹೇಳಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಗುರುವಾರ ನಡೆದ ಕಸಾಪ 108ನೇ ಸಂಸ್ಥಾಪನೆ ದಿನಾಚರಣೆಯಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಪರಿಷತ್ ಸ್ಥಾಪಿಸಿದರು. ಆ ಮೂಲಕ ರಾಜಾ ಪ್ರತ್ಯಕ್ಷ ದೇವತಾ ಎನ್ನುವುದನ್ನು ಕನ್ನಡಿಗರ ಪಾಲಿಗೆ ಸಾಬೀತುಪಡಿಸಿದರು. ಅವರು ಸ್ಥಾಪಿಸಿದ ಕನ್ನಡ ಸಾಹಿತ್ಯ ಪರಿಷತ್ ಕಾರ್ಯ ಅವಿಸ್ಮರಣೀಯ ಎಂದರು.
ಉದ್ಘಾಟನೆ ನೆರವೇರಿಸಿದ ಕಪನಿಂಬರಗಿ ಸರ್ಕಾರಿ ಫ್ರೌಢ ಶಾಲೆ ಮುಖ್ಯ ಗುರುಮಾತೆ ಕಮಲಾ ಮುರಾಳ ಮಾತನಾಡಿ, ಪಂಪನಿಂದ ಕುವೆಂಪುವರೆಗೆ ಕನ್ನಡ ಸಾಹಿತ್ಯ ವಿಪುಲವಾಗಿ ಬೆಳೆದು ನಮ್ಮ ಕನ್ನಡ ಭಾಷೆ ಶ್ರೀಮಂತಗೊಂಡಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ನೇತೃತ್ವದಲ್ಲಿ ಸರ್ ಎಂ.ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್ ಅವರ ಕಾರ್ಯ ಕ್ಷಮತೆಯಿಂದ ಸಾಹಿತ್ಯ ಪರಿಷತ್ ಈ ಹಂತಕ್ಕೆ ಬೆಳಯಲು ಕಾರಣವಾಯಿತು ಎಂದರು.
ಹಿರೇಬೇವನೂರಿನ ಕೃಷ್ಣಾ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸಕ ಬಸವರಾಜ ಹೆಗ್ಗುಂಡೆ ಉಪನ್ಯಾಸ ನೀಡಿದರು.
ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಅಧ್ಯಕ್ಷತೆ ವಹಿಸಿದ್ದರು. ಆರ್.ಬಿ. ಬಿರಾದಾರ, ಶ್ರೀಕಾಂತ ಗೊಂಗಡಿ, ಬಿ.ಎಚ್. ನಾಡಗಿರಿ, ಫೈಸಲ್ ಪಟೇಲ್, ಯುವರಾಜ ಚೋಳಕೆ ಮಾತನಾಡಿದರು. ಮಹಾದೇವ ರೆಬಿನಾಳ, ಡಾ.ಸಂಗಮೇಶ ಮೇತ್ರಿ, ಅಭಿಷೇಕ ಚಕ್ರವರ್ತಿ, ಅಲ್ಲಮಪ್ರಭು ಮಲ್ಲಿಕಾರ್ಜುನಮಠ, ಅಹ್ಮದ್ ವಾಲೀಕಾರ, ಬಸವರಾಜ ರೆಬಿನಾಳ, ಸಂಗೀತಾ ಮಠಪತಿ, ದತ್ತಾತ್ರೇಯ ಹಿಪ್ಪರಗಿ, ರಾಜಶೇಖರ ಕೋಟಿ, ಮಹಾಲಿಂಗ ಬಂಡಾರಕವಟೆ, ಮಂಜುಳಾ ಹಿಪ್ಪರಗಿ, ಸುಭಾಸ್ ಬೆಟಗೇರಿ, ಶ್ರೀಕಾಂತ ದಾಶ್ಯಾಳ ಮತ್ತಿತರರಿದ್ದರು.