ವಿಜಯಪುರ: ಎಲ್ಲರಲ್ಲಿಯೂ ನಾವೆಲ್ಲರೂ ಒಂದೇ ಎನ್ನುವ ಭಾವನೆ ಮೂಡಿದಾಗ ಮಾತ್ರ ಸಂವಿಧಾನಕ್ಕೆ ಒಂದು ಅರ್ಥ ಸಿಗುತ್ತದೆ ಎಂದು ನಿವೃತ್ತ ನ್ಯಾಯಾಧೀಶ ಎನ್.ಎಸ್. ಮಮದಾಪುರ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಇಲ್ಲಿನ ಅನೌಪಚಾರಿಕ ಶಿಕ್ಷಣ ಸಂಸ್ಥೆಯಲ್ಲಿ ಮಾನವ ಹಕ್ಕುಗಳ ಕಲ್ಯಾಣ ಮಂಡಳಿ, ಬಿಜಾಪುರ ನಗರ ಸ್ಲಂ ಅಭಿವೃದ್ಧಿ ಸಮಿತಿ ಒಕ್ಕೂಟ, ಮಹಿಳಾ ಸ್ವ-ಸಹಾಯ ಸಂಘಗಳ ಒಕ್ಕೂಟ, ಕಟ್ಟಡ ಕಾರ್ಮಿಕರು, ಆಟೋ ಚಾಲಕರ ಸಂಘಗಳ ಸಂಯುಕ್ತಾಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಾನವಹಕ್ಕುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿದಿನ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿರುತ್ತವೆ. ಆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ನಾವು ಒಬ್ಬರನೊಬ್ಬರು ಸಮಾನತೆ ಭಾವನೆಯಿಂದ, ಮಾನವೀಯತೆಯಿಂದ ನೋಡಿದರೆ ಅದುವೇ ಮಾನವ ಹಕ್ಕು. ಆದ್ದರಿಂದ ನಾವೆಲ್ಲರೂ ಯಾವುದೇ ಜಾತಿ, ಮತ, ಪಂಥ ಎನ್ನದೆ ಎಲ್ಲರೂ ಸಮಾನರು ಎಂದು ತಿಳಿದುಕೊಳ್ಳಬೇಕು ಎಂದರು.
ವಕೀಲ ಚಂದ್ರಕಾಂತ ಗೊಬ್ಬೂರ ಮಾತನಾಡಿ, ದಿನನಿತ್ಯ ಒಂದಲ್ಲ ಒಂದು ಮಾನವ ಹಕ್ಕು ಉಲ್ಲಂಘನೆಯಾಗುತ್ತಾ ಇರುತ್ತದೆ. ಅದನ್ನು ನಾವುಗಳು ಅದರ ವಿರುದ್ಧ ಧ್ವನಿ ಎತ್ತಬೇಕು. ಮಾನವ ಹಕ್ಕುಗಳ ಉಲ್ಲಂಘನೆ ಶತಮಾನಗಳಿಂದ ನಡೆಯುತ್ತ ಬಂದಿದೆ. ಇತ್ತೀಚಿನ ದಿನದಲ್ಲಿ ಮಾನವಹಕ್ಕುಗಳ ಆಯೋಗ ಅದಕ್ಕೆ ಕಡಿವಾಣ ಹಾಕುತ್ತಿದೆ ಎಂದು ತಿಳಿಸಿದರು. ಮುಖಂಡರಾದ ಅಕ್ರಂ ಮಾಶ್ಯಾಳಕರ, ಸ್ವಾಮಿ ಜೇಮ್ಸ್ , ನಿರ್ಮಲಾ ಹೊಸಮನಿ, ಬಸವರಾಜ ಮಾಳಿ ಮತ್ತಿತರರಿದ್ದರು.