ಜಿಲ್ಲೆ

ಗಣತಿದಾರರು ಸ್ಪಷ್ಟ ಮಾಹಿತಿ ಕಲೆ ಹಾಕಿ

ವಿಜಯಪುರ: ಭಾರತದಲ್ಲೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ ಆರಂಭವಾಗಿದ್ದು 2021ನೇ ಸಾಲಿಗೆ ಗಣತಿದಾರರು ಸ್ಪಷ್ಟ ಮಾಹಿತಿ ಕಲೆ ಹಾಕಲು ಸಂಬಂಧಿಸಿದ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ್ ತಿಳಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಭಾರತದ ಜನಗಣತಿ-2021, ಮನೆಪಟ್ಟಿ ಮತ್ತು ಮನೆಗಣತಿ, ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್ ಪರಿಷ್ಕರಣೆ- 2020 ಕುರಿತು ಅಧಿಕಾರಿಗಳಿಗಾಗಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಜನಗಣತಿ ಮಾಡುವಾಗ ಓಣಿ, ಕೇರಿ, ಕಾಲನಿ ಮತ್ತು ಯಾವುದೇ ಒಂದು ಮನೆಯೂ ಗಣತಿಯಿಂದ ವಂಚಿತವಾಗದಂತೆ ಅತ್ಯಂತ ಜಾಗೃತರಾಗಿ ಕಾರ್ಯ ನಿರ್ವಹಿಸಬೇಕು. ನಗರ ಮತ್ತು ಗ್ರಾಮೀಣ ಭಾಗದ ಜನಗಣತಿ ಅಧಿಕಾರಿಗಳು ತರಬೇತಿಯ ಸಂಪೂರ್ಣ ಮಾಹಿತಿ ಪಡೆಯಬೇಕು. ಗಣತಿ ಕಾರ್ಯವನ್ನು ಯಶಸ್ವಿಯಾಗಿ ಮಾಡುವಂತೆ ಅವರು ಹೇಳಿದರು.
ಭಾರತೀಯ ಜನಗಣತಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿ ಎರಡು ವಿಧಾನಗಳಿಂದ ಮೊಬೈಲ್ ಆ್ಯಪ್ ಮುದ್ರಿತವಾದ ಅನುಸೂಚಿಗಳ ಮೂಲಕ ನಡೆಸಲಾಗುತ್ತಿರುವ ಜನಗಣತಿಯಾಗಿದೆ. ಭಾರತದ ಜನಗಣತಿ 2021ರ ನಿಯೋಜಿತ ಕಾರ್ಯಾಚರಣೆಯನ್ನು ಪೂರೈಸಲು ಈ ಮೊಬೈಲ್ ಆ್ಯಪ್ ಅಳವಡಿಸಿಕೊಂಡು, ಮಾಹಿತಿ ಸಂಸ್ಕರಣೆ ಮಾಡಬೇಕೆಂದು ಅವರು ತಿಳಿಸಿದರು.
ಮೊಬೈಲ್ ಅಪ್ಲಿಕೇಶನ್ ಸಹಾಯದಿಂದ ಅನುಸೂಚಿಗಳ ಮತ್ತು ಐಸಿಆರ್ ಪ್ರಕ್ರಿಯೆಗೆ ಹೆಚ್ಚುವರಿ ಲಾಜಿಸ್ಟಿಕ್ಸ್ ಅಗತ್ಯವಿಲ್ಲದೆ ಎಲ್ಲಾ ಮಾಹಿತಿಯು ಪ್ರಕ್ರಿಯೆಗೆ ತಕ್ಷಣ ಸಿದ್ಧವಾಗಲಿದ್ದು, ಮೊಬೈಲ್ ಆ್ಯಪ್ ಮೂಲಕ ದತ್ತಾಂಶ ಸಂಗ್ರಹವು ಕಚ್ಚಾ ಮಾಹಿತಿ ಐಸಿಆರ್ ಸಂಸ್ಕರಣೆ ಕೆಲಸದ ಹೊರೆ ಮತ್ತು ಜನ ಗಣತಿ ಮಾಹಿತಿ ಪ್ರಕ್ರಿಯೆಗೊಳಿಸಲು ಹಾಗೂ ಲಿತಾಂಶವನ್ನು ಸರಿಯಾದ ಸಮಯಕ್ಕೆ ಪ್ರಕಟಿಸಲು ಕಡಿಮೆ ಸಮಯದಲ್ಲಿ ಕಾರ್ಯವನ್ನು ಮಾಡಬಹುದಾಗಿದೆ ಎಂದರು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಗಂಗಾಧರ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, 2021ರ ಜನಗಣತಿಯು 16ನೇ ಜನಗಣತಿಯಾಗಿದ್ದು, ಜನಸಂಖ್ಯೆ, ಆರ್ಥಿಕ ಚಟುವಟಿಕೆ, ಸಾಕ್ಷರತೆ ಮತ್ತು ಶಿಕ್ಷಣ, ವಸತಿ ಮತ್ತು ಮನೆಯ ಸೌಲಭ್ಯಗಳು, ನಗರೀಕರಣ, ಲವತ್ತತೆ ಮತ್ತು ಮರಣ, ಪರಿಶಿಷ್ಟ ಜಾತಿ ಮತ್ತು ಪಂಗಡ, ಭಾಷೆ, ಧರ್ಮ ಇತರೆ ಮಾಹಿತಿಯ ಅತ್ಯಂತ ವಿಶ್ವಾಸಾರ್ಹ ಮೂಲವಾಗಿದೆ ಎಂದು ತಿಳಿಸಿದರು.
ಜನಗಣತಿ ತರಬೇತುದಾರ ಮ್ಯಾಥ್ಯೂ ಮಾಹಿತಿ ನೀಡಿದರು. ಉಪ ವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ, ನೋಡಲ್ ಅಧಿಕಾರಿ ಎನ್.ಪಿ. ಲಮಾಣಿ, ಶಿರಸ್ತೇದಾರ ರಾಜಶೇಖರ ಹಾದಿಮನಿ ಮತ್ತಿತರರಿದ್ದರು.