ಜಿಲ್ಲೆ

ಭೀಮಾತೀರದಲ್ಲಿ ಮರ್ಯಾದೆ ಹತ್ಯೆ? ಪ್ರೇಯಸಿಯ ಕಣ್ಣೆದುರಲ್ಲೇ ಪ್ರಿಯಕರನ ಹತ್ಯೆ ಮಾಡಿ ಶವ ಹೊತ್ತೊಯ್ದ ದುರುಳರು

ವಿಜಯಪುರ: ಮರ್ಯಾದೆ ಹತ್ಯೆ ಎನ್ನಲಾದ ಘಟನೆ ಭೀಮಾತೀರದಲ್ಲಿ ನಡೆದಿದೆ. ಪ್ರೇಯಸಿಯ ಕಣ್ಣೆದುರಲ್ಲೇ ಪ್ರಿಯಕರನ ಭೀಕರ ಹತ್ಯೆ ನಡೆದಿದ್ದು, ಕೊಲೆ ಮಾಡಿ ಶವವನ್ನೂ ಬಿಡದೇ ದುರುಳರು ಕೊಂಡೊಯ್ದಿದ್ದಾರೆಂದು ಹೇಳಲಾಗಿದೆ.

ರವಿ ನಿಂಬರಗಿ (32) ಕೊಲೆಯಾದ ಯುವಕ. ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ. ಕಳೆದ ಮೂರ್ನಾಲ್ಕು ವರ್ಷದಿಂದ ಅನ್ಯಕೋಮಿನ ಯುವತಿಯನ್ನು ರವಿ ಲವ್​ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಯುವತಿ ಕಡೆಯ ಸುಮಾರು 8 ಜನರು ಸೇರಿ ರವಿಯನ್ನು ಅಟ್ಟಾಡಿಸಿ ಹೊಡೆದು ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಹತ್ಯೆ ಮಾಡಿ ಶವದ ಸಮೇತ ದುಷ್ಟರು ನಾಪತ್ತೆಯಾಗಿದ್ದು, ಯುವತಿಯೇ ಯುವಕನ ಮನೆಗೆ ಬಂದು ವಿಷಯ ಮುಟ್ಟಿಸಿದ್ದಾಳೆಂದು ಹೇಳಲಾಗಿದೆ. ಅಲ್ಲದೆ, ಯುವತಿಯಿಂದಲೇ ಆಲಮೇಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವುದಾಗಿ ತಿಳಿದುಬಂದಿದೆ. (ದಿಗ್ವಿಜಯ ನ್ಯೂಸ್​)