ಜಿಲ್ಲೆ

ರೈತರಿಗಾಗಿ ದೇಸಿ ಕಾರ್ನರ್ ಸ್ಥಾಪಿಸಿ

ವಿಜಯಪುರ: ತರಬೇತಿಯಲ್ಲಿ ಪಡೆದ ಜ್ಞಾನವನ್ನು ರೈತರಿಗೆ ಪರಿಚಯಿಸಿ, ಪ್ರತಿಯೊಬ್ಬರು ತಮ್ಮ ಸೇವಾ ಕೇಂದ್ರದಲ್ಲಿ ದೇಸಿ ಕಾರ್ನರ್ ಸ್ಥಾಪಿಸಲು ಕೃಷಿ ಮಹಾವಿದ್ಯಾಲಯ ವಿದ್ಯಾಧಿಕಾರಿ ಡಾ. ಎಸ್. ಬಿ. ಕಲಘಟಗಿ ಸಲಹೆ ನೀಡಿದರು.
ನಗರದ ಹೊರವಲಯ ಹಿಟ್ನಳ್ಳಿಯಲ್ಲಿರುವ ಕೃಷಿ ಮಹಾವಿದ್ಯಾಲಯದಲ್ಲಿ ಗುರುವಾರ ನಡೆದ ಕೃಷಿ ಪರಿಕರ ಮಾರಾಟಗಾರರಿಗೆ (ದೇಸಿ) ಪ್ರಮಾಣ ಪತ್ರ ವಿತರಣಾ ಸಮಾರಂಭದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ವಿಜ್ಞಾನಿಗಳು ಕೊಟ್ಟ ಜ್ಞಾನವನ್ನು ರೈತರಿಗೆ ತಿಳಿಸಿ ಲಾಭದಾಯಕ ಕೃಷಿಗೆ ಒತ್ತು ನೀಡಲು ಮಾರ್ಗದರ್ಶನ ಮಾಡಬೇಕು ಎಂದು ತಿಳಿಸಿದರು.
ಮಹಾಲಿಂಗಪುರ ರೋಹಿಣಿ ಬಯೋಟೆಕ್ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಎಂ.ವೈ. ಕಟ್ಟಿ ಮಾತನಾಡಿ, ಸಾಮಾಜಿಕ ವ್ಯವಸ್ಥೆಯಲ್ಲಿ ಪ್ರಾಮಾಣಿಕತೆಯಿಂದ ಕರ್ತವ್ಯ ಪ್ರಜ್ಞೆಯಿಂದ ಕೆಲಸ ಮಾಡಿ ರೈತರನ್ನು ಲಾಭದಾಯಕ ಕೃಷಿಗೆ ತರಲು ಒತ್ತು ನೀಡಬೇಕು. ಮಣ್ಣಿನ ಗುಣಧರ್ಮಗಳ ಬಗ್ಗೆ ಪರೀಕ್ಷಿಸಿ ಸೂಕ್ತ ಬೆಳೆಗಳನ್ನು ಬೆಳೆಯಲು ರೈತರಿಗೆ ಸಲಹೆಗಳನ್ನು ನೀಡಬೇಕು ಎಂದರು.

ವಿದ್ಯಾಲಯದ ಸಹ ವಿಸ್ತರಣಾ ನಿರ್ದೇಶಕ ಡಾ. ಆರ್. ಬಿ.ಬೆಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಸಂಶೋಧನಾ ನಿರ್ದೇಶಕ ಡಾ. ಎಚ್. ಬಿ.ಬಬಲಾದ, ಎಸ್.ಜಿ.ನಾಡಗೌಡರ, ಎಂ.ಎಸ್. ಧನೆಲಪ್ಪಗೋಳ, ಬಿ.ಟಿ. ಈಶ್ವರಗೊಂಡ, ಎಂ. ಎಂ. ಸಜ್ಜನ ಹಾಗೂ ಸಿಂದಗಿ, ವಿಜಯಪುರ ತಾಲೂಕಿನ ಕೃಷಿ ಪರಿಕರ ಮಾರಾಟ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.