ವಿಜಯಪುರ: ಪುರದೇವತೆ ಶ್ರೀ ಸಿದ್ಧೇಶ್ವರ ಜಾತ್ರೆ ಜ. 12 ರಿಂದ ಅದ್ದೂರಿಯಾಗಿ ಜರುಗಲಿದ್ದು ತನ್ನಿಮಿತ್ತ ಬುಧವಾರ ದೇವಸ್ಥಾನ ಆವರಣದ ಡಾ.ಫ.ಗು. ಹಳಕಟ್ಟಿ ಸಭಾಭವನದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಈ ಬಾರಿ ಜಾತ್ರೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಈ ಮಧ್ಯೆ ಸರ್ಕಾರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೂ ಚಾಲನೆ ನೀಡಲಾಗುತ್ತಿದ್ದು ಸಾರ್ವಜನಿಕರು ಮುಕ್ತ ಮನಸ್ಸಿನಿಂದ ಕೈಜೋಡಿಸಬೇಕೆಂದರು.
ಜ.16ರಂದು ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ನಗರಕ್ಕೆ ಆಗಮಿಸಲಿದ್ದಾರೆ. ಜಿಲ್ಲಾಡಳಿತ ಭವನ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಯಡಿಯೂರಪ್ಪ ಅವರು 500 ಕೋಟಿ ರೂ.ಮೊತ್ತದ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ಜಿಲ್ಲಾಡಳಿತ ಭವನಕ್ಕೆ 25 ಕೋಟಿ ರೂ.ಬಿಡುಗಡೆ ಮಾಡಲಾಗಿದೆ. ಸ್ಯಾಟ್‌ಲೈಟ್ ಬಸ್ ನಿಲ್ದಾಣ, 125 ಕೋಟಿ ರೂ. ವೆಚ್ಚದಲ್ಲಿ ಒಳಚರಂಡಿ ವ್ಯವಸ್ಥೆ, ಸಿಸಿ ಕ್ಯಾಮೆರಾ ಅಳವಡಿಕೆ, 1500 ಮನೆ ನಿರ್ಮಾಣ ಕಾಮಗಾರಿ ಹೀಗೆ ಮುಂತಾದ ಕಾಮಗಾರಿಗಳಿಗೆ ಚಾಲನೆ ನೀಡುವರೆಂದು ತಿಳಿಸಿದರು.
ಸಿದ್ಧೇಶ್ವರ ಸಂಸ್ಥೆ ಆಡಳಿತ ಮಂಡಳಿ ಸದಸ್ಯರಾದ ಬಸಯ್ಯ ಹಿರೇಮಠ, ಸಂಗು ಸಜ್ಜನ, ಜಗದೀಶ ಕ್ಷತ್ರಿ, ಎಸ್.ಎಚ್. ನಾಡಗೌಡರ, ಸಿದ್ರಾಮಪ್ಪ ಉಪ್ಪಿನ್, ಸಾಯಿಬಣ್ಣ ಭೋವಿ, ವಿಜಯಕುಮಾರ ಡೋಣಿ, ಎಂ.ಎಂ.ಸಜ್ಜನ ಮತ್ತಿತರರಿದ್ದರು.