ಜಿಲ್ಲೆ

ಮಹಾಮಾರಿ ಗೆಲ್ಲುವುದೇ ಸರ್ಕಾರದ ಮೊದಲ ಆದ್ಯತೆ

ವಿಜಯಪುರ: ರೈತರು ಯಾವುದೇ ಕಾರಣಕ್ಕೂ ಫಸಲು ಬೀದಿಗೆ ಚೆಲ್ಲಬಾರದು. ಸದ್ಯ ಮಹಾಮಾರಿ ಆವರಿಸಿದ್ದು ಮೊದಲು ಬದುಕು ಮುಖ್ಯ. ಬಳಿಕ ಬೆಳೆ ಹಾನಿ ಸಮೀಕ್ಷೆ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸುವುದಾಗಿ ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.
ಕರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸೋಮವಾರ ಜಿ.ಪಂ. ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮೊದಲು ಕರೊನಾ ನಿಯಂತ್ರಣಕ್ಕೆ ಬರಲಿ. ಆ ಬಳಿಕ ರೈತರ ಎಲ್ಲ ಸಮಸ್ಯೆ ಬಗೆ ಹರಿಸಲು ಪ್ರಯತ್ನಿಸಲಾಗುವುದು ಎಂದರು.

ಕೃಷಿ, ತೋಟಗಾರಿಕೆ ಉತ್ಪನ್ನಗಳ ಮುಕ್ತ ಮಾರುಕಟ್ಟೆ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗಿದೆ. ಕೆಲವರು ಕಲ್ಲಂಗಡಿ ಹಣ್ಣಿನ ಬಗ್ಗೆ ಅಪ್ರಚಾರ ಮಾಡುತ್ತಿದ್ದಾರೆ. ಈ ಹಿಂದೆ ಕೋಳಿ ತಿನ್ನುವುದರಿಂದ ಕರೊನಾ ಬರುತ್ತದೆ ಎಂದು ವದಂತಿ ಹಬ್ಬಿಸಿದರು. ಇಂಥ ವದಂತಿಗೆ ಕಿವಿಗೊಡಬಾರದು ಎಂದು ಹೇಳಿದರು.

ರೈತರಿಗೆ ತೊಂದರೆ ಕೊಡುವ ಅಧಿಕಾರಿಗಳು, ಶೋಷಣೆ ಮಾಡುವ ಮಧ್ಯವರ್ತಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ರೈತರು ಬೆಳೆದ ಬೆಳೆ ಅವರ ಮಕ್ಕಳಂತೆ. ಲಿಂಬೆ, ಹೂ ಸೇರಿದಂತೆ ಯಾವುದೇ ಬೆಳೆ ನಾಶಪಡಿಸಬಾರದು. ಆತ್ಮಹತ್ಯೆಯಂಥ ನಿರ್ಧಾರಕ್ಕೆ ಮುಂದಾಗಬಾರದು. ಸರ್ಕಾರ ರೈತರ ಜತೆಗಿರುತ್ತದೆ ಎಂದು ಅಭಯ ನೀಡಿದರು.

ದ್ರಾಕ್ಷಿ ಬೆಳೆಗಾರರ ಸಮಸ್ಯೆ

ಜಿಲ್ಲೆಯ ದ್ರಾಕ್ಷಿ ಬೆಳೆಗಾರರ ಸಮಸ್ಯೆ ನನಗೆ ಗೊತ್ತಿದೆ. ಇಲ್ಲಿನ ಒಣದ್ರಾಕ್ಷಿ ಆನ್‌ಲೈನ್ ಟ್ರೇಡಿಂಗ್ ಯಾವುದೇ ಕಾರಣಕ್ಕೂ ಬಂದ್ ಆಗಲ್ಲ. ಈ ಬಗ್ಗೆ ದ್ರಾಕ್ಷಿ ಬೆಳೆಗಾರರು ಆತಂಕಕ್ಕೊಳಗಾಗಬಾರದು. ವಿಜಯಪುರ- ಬಾಗಲಕೋಟೆ ಜಿಲ್ಲೆಯಲ್ಲಿ 2850 ಟನ್ ಸಾಮರ್ಥ್ಯದ ಕೋಲ್ಡ್ ಸ್ಟೋರೇಜ್‌ಗಳಿದ್ದು, ರೈತರು ಇವುಗಳ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಭಾರತ ಲಾಕ್‌ಡೌನ್ ಇರುವುದರಿಂದ ಹೊರಗಿನ ವ್ಯಾಪಾರಸ್ಥರು ಬರುತ್ತಿಲ್ಲ. ಹಾಗಂತ ಆನ್‌ಲೈನ್ ಟ್ರೇಡಿಂಗ್ ವಹಿವಾಟು ನಿಲ್ಲಲ್ಲ. ಒಣದ್ರಾಕ್ಷಿ ಉದ್ಯಮಕ್ಕೆ ಬೇಕಾದ ಡಿಪ್ಪಿಂಗ್ ಆಯಿಲ್ ಸೇರಿದಂತೆ ಅಗತ್ಯ ವಸ್ತುಗಳ ವ್ಯವಸ್ಥೆಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ತಾಜಾ ದ್ರಾಕ್ಷಿಯನ್ನು ಕೋಲ್ಡ್ ಸ್ಟೋರೇಜ್‌ಗಳಲ್ಲಿ ಇಡಬಹುದು. ಅದೂ ಆಗದಿದ್ದರೆ ವೈನ್ ಉದ್ಯಮಕ್ಕೆ ಬಳಸಿಕೊಳ್ಳಬೇಕೆಂದು ಬಿ.ಸಿ.ಪಾಟೀಲ ತಿಳಿಸಿದರು.