ಜಿಲ್ಲೆ

ರೈತರು ಆತ್ಮಸ್ಥೈರ್ಯ ಕಳೆದುಕೊಳ್ಳದಿರಲಿ

ವಿಜಯಪುರ: ರೈತ ಈ ದೇಶದ ಬೆನ್ನೆಲುಬು. ಆತನ ಅಭಿವೃದ್ಧಿಗೋಸ್ಕರ ಸರ್ಕಾರಗಳು ಹಲವಾರು ಯೋಜನೆಗಳನ್ನು ರೂಪಿಸಿವೆ. ರೈತ ತನ್ನ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳದೆ ಯೋಜನೆಗಳ ಸದುಪಯೋಗ ಪಡೆದು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕೆಂದು ವಿಜಯಪುರ ಕೃಷಿ ಮಹಾವಿದ್ಯಾಲಯದ ಸಹ ವಿಸ್ತರಣಾ ನಿರ್ದೇಶಕ ಡಾ.ಆರ್.ಬಿ. ಬೆಳ್ಳಿ ಹೇಳಿದರು.

ನಗರದ ಕನಕದಾಸ ಬಡಾವಣೆಯಲ್ಲಿರುವ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರೈತರು ಯಾವಾಗಲೂ ವಾಣಿಜ್ಯ ಬೆಳೆಗಳನ್ನು ಬೆಳೆದು ಉತ್ಪಾದನಾ ವೆಚ್ಚ ಹೆಚ್ಚಾಗಿ ಮಾರುಕಟ್ಟೆಯಲ್ಲಿ ದರ ಸಿಗದಿದ್ದಾಗ ಆತ್ಮಸ್ಥೈರ್ಯ ಕಳೆದುಕೊಳ್ಳುತ್ತಾರೆ. ಬದಲಿಗೆ ವಿವಿಧ ಬೆಳೆಗಳನ್ನು ಬೆಳೆದು ಸುಸ್ಥಿರ ಸ್ವಾವಲಂಬಿ ಕೃಷಿ ಮಾಡಿ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ದೇಶಕ್ಕೆ ವಿಷಮುಕ್ತ ಆಹಾರ ನೀಡಬೇಕು. ಮಾರುಕಟ್ಟೆಯಲ್ಲಿ ದರ ನೋಡಿಕೊಂಡು ಬೆಳೆ ಯೋಜನೆ ರೂಪಿಸಬೇಕು ಎಂದರು.

ಪ್ರಾಧ್ಯಾಪಕ ಡಾ. ಶಶಿಧರ ಶಿರಹಟ್ಟಿ ಮಾತನಾಡಿ, ಕೃಷಿಯಲ್ಲಿ ಉತ್ಪಾದನಾ ವೆಚ್ಚ ತಗ್ಗಿಸಲು, ಕೃಷಿ ಕಾರ್ಮಿಕರ ಕೊರತೆ ನೀಗಿಸಲು ಇರುವ ಕೃಷಿ ಯಂತ್ರೋಪಕರಣ ಬಳಕೆ ಮಹತ್ವ ಕುರಿತು ಮಾಹಿತಿ ನೀಡಿದರು.

ನಿವೃತ್ತ ಕೃಷಿ ಅಧಿಕಾರಿ ಎಂ.ಎಂ. ಸಜ್ಜನ, ಬಿ.ಟಿ. ಈಶ್ವರಗೊಂಡ, ಎಂ.ಎಸ್. ನಿಂಬಾಳ, ಕಲ್ಲಪ್ಪ ನಿಂಗನಗೌಡ, ಗೌರವ್ವ ಜಡೆಮ್ಮನವರ, ಗಿರೀಶ ಬ್ಯಾಕೋಡ, ಕೃಷಿ ಪರಿಕರ ಮಾರಾಟ ಪ್ರತಿ ನಿಧಿಗಳು, ರೈತರು ಉಪಸ್ಥಿತರಿದ್ದರು.