ಜಿಲ್ಲೆ

ಕೃಷಿನಾದ ಕೌರವ, ರೈತರಿಗೆ ಗೌರವ

ವಿಜಯಪುರ : ಬರದನಾಡು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಸರಕೋಡ ಮತ್ತು ಕವಡಿಮಟ್ಟಿ ಗ್ರಾಮದಲ್ಲಿ ಮಂಗಳವಾರ ಕೃಷಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ರೈತರೊಂದಿಗೆ ಒಂದು ದಿನ ಕಾರ್ಯಕ್ರಮದ ಹಿನ್ನೆಲೆ ಕೃಷಿ ಸಚಿವ ಬಿ.ಸಿ.ಪಾಟೀಲ ಕೃಷಿಕರಾಗಿ ರೈತರಿಗೆ ಗೌರವ ಸಲ್ಲಿಸಿದ್ದು ವಿಶೇಷವಾಗಿತ್ತು.

ಬಸರಕೋಡ ಗ್ರಾಮದ ಶ್ರೀ ಪವಾಡ ಬಸವೇಶ್ವರ ಗುಡಿಯಲ್ಲಿ ಪೂಜೆ ಸಲ್ಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ವಿವಿಧ ಕೃಷಿ ಚಟುವಟಿಕೆಗೆ ನಾಂದಿ ಹಾಡಿದರು.

ಬೆಳಗ್ಗೆ ದೇವರ ದರ್ಶನ ಪಡೆದ ನಂತರ ರೈತರಿಗೆ ಆತ್ಮ ವಿಶ್ವಾಸ ತುಂಬುವ ನಿಟ್ಟಿನಲ್ಲಿ ರೈತ ಪವಾಡೆಪ್ಪ ಹಣಮಪ್ಪ ವಡ್ಡರ ಅವರ ಜಮೀನಿನಲ್ಲಿ ಗೋಮಾತೆಗೆ ಪೂಜೆ ಸಲ್ಲಿಸಿದರು. ನಂತರ ಮೇವು ಕತ್ತರಿಸಿ ತಿನ್ನಿಸುವ ಮೂಲಕ ಗಮನ ಸೆಳೆದರು. ದೇಸಿ ಕೋಳಿ ಘಟಕ, ದೇಸಿ ಆಡುಗಳ ವೀಕ್ಷಣೆ ಬಳಿಕ ಶೇಂಗಾ ಬೆಳೆಯಲ್ಲಿ ತುಂತುರು ನೀರಾವರಿ ಘಟಕಕ್ಕೆ ಚಾಲನೆ ನೀಡಿದ ಅವರು, ಕೊಟ್ಟಿಗೆ ಗೊಬ್ಬರದ ಘಟಕಕ್ಕೆ ಕಾಂಪೋಸ್ಟ್ ಕಲ್ಚರ್ ಸಿಂಪಡಣೆ ಮಾಡುವುದು, ಅಜೋಲ್ಲಾ ಘಟಕದ ವೀಕ್ಷಣೆ, ಹೈಡ್ರೋಪೊನಿಕ್ಸ್ ಘಟಕ ವೀಕ್ಷಿಸಿದರು. ಎರೆಹುಳು ಗೊಬ್ಬರದ ಘಟಕಗಳಿಗೆ ಎರೆಹುಳುಗಳನ್ನು ಬಿಡುವುದು, ಸಾವಯವ ಬಾಳೆ ಬೆಳೆಯಲ್ಲಿ ಬಾಳೆ ಗೊನೆ ಕತ್ತರಿಸುವ ಮೂಲಕ ರೈತರಿಂದ ಮೆಚ್ಚುಗೆ ಪಡೆದರು.

ಗೋಧಿ ಕೊಯ್ಲು ಮಾಡಿದ ಸಚಿವ
ರೈತ ಸಿದ್ದು ಎಂ.ಮೇಟಿ ಅವರ ಜಮೀನಿನಲ್ಲಿ ಗೋಧಿ ಬೆಳೆಯನ್ನು ಟ್ರಾೃಕ್ಟರ್ ಚಲಾಯಿಸುವ ಮೂಲಕ ಯಾಂತ್ರಿಕೃತ ಕೊಯ್ಲು ಮಾಡಿ ಗಮನ ಸೆಳೆದರು. ಕಬ್ಬು ಕಟಾವಿನ ನಂತರ ರವದಿಯನ್ನು ಪೆಂಡಿ ಕಟ್ಟುವುದಕ್ಕೆ ಚಾಲನೆ ನೀಡಿದರು. ಶ್ರೀಶೈಲ ಬಸವಂತರಾಯ ಮೇಟಿ ಅವರ ಜಮೀನಿನಲ್ಲಿ ನೆರಳು ಮನೆಯಲ್ಲಿ ವಿಳ್ಯದೆಲೆ ಬೆಳೆ ವೀಕ್ಷಣೆ ಮಾಡಿದರು. ಗಿರ್ ತಳಿಯ ಆಕಳು ಘಟಕ ವೀಕ್ಷಣೆ ಮಾಡಿ, ಅವುಗಳಿಗೆ ಮೇವು ತಿನ್ನಿಸಿದರು. ಹೇಮರೆಡ್ಡಿ ಬಸವಂತರಾಯ ಮೇಟಿ ಅವರ ಜಮೀನಿನಲ್ಲಿ ದ್ರಾಕ್ಷಿ ಬೆಳೆಗೆ ಲಘು ಪೋಷಕಾಂಶ ಸಿಂಪಡಣೆಗೆ ಚಾಲನೆ ನೀಡಿದರು.

ಕಣ್ಣೀರಿಟ್ಟ ರೈತ
ರೈತನ ಹೊಲಕ್ಕೆ ಭೇಟಿ ನೀಡಿದ ಕೃಷಿ ಸಚಿವರು ರೈತರೊಂದಿಗೆ ಸಂವಾದ ನಡೆಸಿದ ವೇಳೆ ಪವಾಡೆಪ್ಪ ವಡ್ಡರ ಭಾವುಕರಾಗಿ ಕಣ್ಣೀರಿಟ್ಟರು. ಸವಳು-ಜವಳು ಜಮೀನಿನಲ್ಲಿ ಏನೂ ಬೆಳೆ ಹಾಕಿದರೂ ಬೆಳೆ ಬೆಳೆಯುತ್ತಿರಲಿಲ್ಲ. ಅದನ್ನು ಅಭಿವೃದ್ಧಿಪಡಿಸಲು ಅನೇಕ ವರ್ಷ ಬೇಕಾಯಿತು. ಇದೀಗ ಎಲ್ಲರೂ ಹೊಲಕ್ಕೆ ಭೇಟಿ ನೀಡಿ ಸಾಧನೆ ಬಗ್ಗೆ ಕೊಂಡಾಡುತ್ತಾರೆ. ಕೃಷಿ ಸಚಿವರೇ ನಮ್ಮ ಹೊಲಕ್ಕೆ ಭೇಟಿ ನೀಡುತ್ತಾರೆ ಎಂದು ಅಂದುಕೊಂಡಿರಲಿಲ್ಲ ಎನ್ನುತ್ತ ಕಣ್ಣೀರಿಟ್ಟರು.

ಮನೆ ಬಾಗಿಲಿಗೆ ಸರ್ಕಾರ
ರಾಜ್ಯದಲ್ಲಿ ಸಾಲದ ಹೊರೆಯಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಅದನ್ನು ತಡೆದು ಅವರಲ್ಲಿ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಸರ್ಕಾರವೇ ರೈತರ ಮನೆ, ಹೊಲಗಳಿಗೆ ಹೋಗುವ ಯೋಜನೆ ಹಾಕಿಕೊಂಡಿದೆ ಎಂದು ಸಚಿವ ಬಿ.ಸಿ.ಪಾಟೀಲ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ತಿಂಗಳು ರಾಜ್ಯದ 4-5 ಜಿಲ್ಲೆ ಅಥವಾ ತಾಲೂಕುಗಳಿಗೆ ಭೇಟಿ ನೀಡಿ ರೈತರೊಂದಿಗೆ ಸಂವಾದ ನಡೆಸಿ, ಅವರ ಸಮಸ್ಯೆ ಆಲಿಸುವ ಮೂಲಕ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸವನ್ನು ಸರ್ಕಾರ ಮಾಡಲಿದೆ. ಈ ಮೂಲಕ ರೈತರಿಗೆ ಆತ್ಮಸ್ಥೈರ್ಯ, ವಿಶ್ವಾಸ ತುಂಬಿ ಆತ್ಮಹತ್ಯೆ ತಡೆಯಲಾಗುವುದು. ರೈತರ ಹೊಲಗಳಿಗೂ ಸರ್ಕಾರದ ಪ್ರತಿನಿಧಿ, ಅಧಿಕಾರಿಗಳು ಖುದ್ದು ಭೇಟಿ ನೀಡಿ ಸಮಸ್ಯೆ ಆಲಿಸಲಿದ್ದಾರೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ, ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ರಾಜಶೇಖರ ವಿಲಿಯಂ, ವಿವಿಧ ಗ್ರಾಮಗಳ ರೈತ ಮುಖಂಡರು ಭಾಗವಹಿಸಿದ್ದರು.