ವಿಜಯಪುರ: ಜಮೀನುಗಳನ್ನು ರಾಷ್ಟ್ರೀಕರಣಗೊಳಿಸಿ ಸಂಪತ್ತನ್ನು ಸರಿಯಾಗಿ ಹಂಚಿಕೆ ಮಾಡಿದರೆ ನಮಗೆ ಮೀಸಲಾತಿಯೇ ಬೇಡ. ಆದರೆ, ಈ ಎರಡನ್ನೂ ಕೊಡದೆ ನಮ್ಮ ಹಕ್ಕಾಗಿರುವ ಮೀಸಲಾತಿಯನ್ನು ಕಬಳಿಸುವ ಪ್ರಯತ್ನ ನಡೆದಿರುವುದು ದೊಡ್ಡ ದುರಂತ ಎಂದು ಖ್ಯಾತ ಚಿಂತಕ ಡಾ.ಎಚ್.ಟಿ.ಪೋತೆ ವಿಷಾದಿಸಿದರು.ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ರಾಜ್ಯ ದಲಿತ ಸಂಘರ್ಷ ಸಮಿತಿ (ಸಾಗರ್ ಬಣ) ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ‘ಸುಳ್ಳು ಜಾತಿ ಪ್ರಮಾಣಪತ್ರದ ಮೂಲಕ ಪರಿಶಿಷ್ಟ ಜಾತಿ, ಪಂಗಡಗಳ ಸಮುದಾಯದವರಿಗೆ ಆಗುತ್ತಿರುವ ಅನ್ಯಾಯ’ ಕುರಿತಾದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ತಲೆ ತಲಾಂತರದಿಂದ ದಲಿತರನ್ನು ಶೋಷಣೆ ಮಾಡಲಾಗಿದೆ. ಆಸ್ತಿಗಳನ್ನು ಕಬಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಜಮೀನುಗಳನ್ನು ರಾಷ್ಟ್ರೀಕರಣಗೊಳಿಸಿ, ಒಂದೇ ಕಡೆ ಕೇಂದ್ರಿತವಾಗಿರುವ ಸಂಪತ್ತನ್ನು ಸರಿಯಾಗಿ ಹಂಚಿಕೆ ಮಾಡಿ ಆಗ ಮೀಸಲಾತಿಯ ಅವಶ್ಯಕತೆ ಇರುವುದಿಲ್ಲ. ಮೀಸಲಾತಿ ಪಡೆದುಕೊಳ್ಳುವ ಕೆಟ್ಟ ಕೃತ್ಯಗಳ ವಿರುದ್ಧ ಪ್ರಬಲವಾದ ಜನಾಂದೋಲನ ನಡೆಯಬೇಕಿದೆ. ಖೊಟ್ಟಿ ದಾಖಲೆ ಸೃಷ್ಟಿಸಿ ದಲಿತರು ಅಲ್ಲದೆ ಇದ್ದರೂ ಮೀಸಲಾತಿಯನ್ನು ಮೋಸದಿಂದ ಪಡೆಯುವ ಪ್ರಯತ್ನ ಖಂಡನಾರ್ಹ ಎಂದರು.
ಮಾಜಿ ಶಾಸಕ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರೊ.ರಾಜು ಆಲಗೂರ ಮಾತನಾಡಿ, ಖೊಟ್ಟಿ ದಾಖಲೆ ಸೃಷ್ಟಿಸಿ ಎಸ್‌ಸಿ ಪ್ರಮಾಣ ಪತ್ರ ಪಡೆಯುತ್ತಿರುವ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಸರ್ಕಾರ ಈ ವಿಷಯವಾಗಿ ಸುಮ್ಮನೆ ಕೂರಬಾರದು. ಪ್ರಭಾವಿ ನಾಯಕರೇ ತಮ್ಮ ಪುತ್ರಿ, ಅಣ್ಣನಿಗೆ ಸಂಬಂಧಿಸಿದಂತೆ ಎಸ್‌ಸಿ ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆ. ಇದು ಸರಿಯಲ್ಲ, ಈ ರೀತಿ ಖೊಟ್ಟಿ ದಾಖಲೆ ನೀಡಿ ಪರಿಶಿಷ್ಟ ಜಾತಿ, ಪಂಗಡಗಳ ಸೌಲಭ್ಯಗಳನ್ನು ಕಬಳಿಸುವ ಪ್ರಯತ್ನವನ್ನು ಎಲ್ಲ ಮಠಾಧೀಶರು, ಪ್ರಗತಿಪರರು ಖಂಡಿಸಬೇಕು. ಖೊಟ್ಟಿ ಪ್ರಮಾಣ ಪತ್ರದ ವಿರುದ್ಧ ಪ್ರಬಲ ಜನಾಂದೋಲನ ರೂಪುಗೊಳ್ಳಬೇಕಿದೆ ಎಂದರು.
ರಾಜ್ಯ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಡಿ.ಜಿ. ಸಾಗರ್ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ಪ್ರಜಾಪ್ರಭುತ್ವ, ಸಂವಿಧಾನ ಅಪಾಯ ಸ್ಥಿತಿಗೆ ಬಂದಿವೆ. ಸಂವಿಧಾನ ಉಳಿದಾಗ ಮಾತ್ರ ಸಮಾನತೆ, ನೆಮ್ಮದಿ ಜೀವನ ಉಳಿಯಲು ಸಾಧ್ಯ, ಪ್ರಸ್ತುತ ಸರ್ಕಾರ ಎಸ್‌ಇಪಿಟಿಎಸ್‌ಪಿ ಕಡಿಮೆ ಅನುದಾನ ಮೀಸಲಿರಿಸಿ ದೊಡ್ಡ ಅನ್ಯಾಯ ಮಾಡಿದೆ. ಖೊಟ್ಟಿ ದಾಖಲೆ ಸಷ್ಟಿಸಿ ದಲಿತರ ಹಕ್ಕುಗಳನ್ನು ಅಪಹರಿಸುವುದು ಒಂದು ರೀತಿ ಹಗಲು ದರೋಡೆ ಎಂದು ಖಂಡಿಸಿದರು.
ಮುಖಂಡರಾದ ಚಂದ್ರಶೇಖರ ಕೊಡಬಾಗಿ, ರಮೇಶ ಆಸಂಗಿ, ರಾಹುಲ್ ಕುಬಕಡ್ಡಿ, ವಿನಾಯಕ ಗುಣಸಾಗರ, ಅಶೋಕ ಚಲವಾದಿ, ಸಿದ್ದು ರಾಯಣ್ಣವರ, ವೈ.ಸಿ.ಮಯೂರ, ರಮೇಶ ಧರಣಾಕರ, ಮಂಜುನಾಥ ಯಂಟಮಾನ, ಪ್ರಕಾಶ ಗುಡಿಮನಿ, ಪರಶುರಾಮ ದಿಂಡವಾರ, ಹಣಮಂತ ಆಲಮೇಲ, ವಿಜಯಕುಮಾರ ಕಾಂಬಳೆ, ಸಿದ್ದು ಬಾರಿಗಿಡದ, ರವಿಚಂದ್ರ ಚಲವಾದಿ, ಲಕ್ಷ್ಮ್ಮಣ ಹಾಲಿಹಾಳ ಇತರರು ಪಾಲ್ಗೊಂಡಿದ್ದರು.