ಜಿಲ್ಲೆ

ಬೃಹತ್ ಮತ್ಸೃಮೇಳ ಇಂದಿನಿಂದ

ವಿಜಯಪುರ: ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದ ಹತ್ತಿರದ ಆನ್‌ಲೈನ್ ಟ್ರೇಡಿಂಗ್ ವಾಣಿಜ್ಯ ಸಂಕಿರ್ಣದ ಆವರಣದಲ್ಲಿ ಜ.12ರಿಂದ ಮೂರು ದಿನಗಳ ಕಾಲ ಬೃಹತ್ ಮತ್ಸೃ ಮೇಳ ಆಯೋಜಿಸಲಾಗಿದೆ ಎಂದು ಮೀನುಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಶ್ರೀಶೈಲ ಗಂಗನಳ್ಳಿ ಹೇಳಿದರು.
ವಿಜಯಪುರ ಜಿಲ್ಲೆಯಲ್ಲಿ ಮೀನುಗಾರಿಕೆ ಅಭಿವೃದ್ಧಿ ಪಡಿಸಲು ಮತ್ಸೃ ಮೇಳ ಆಯೋಜಿಸಲಾಗಿದೆ. ಜಿಲ್ಲೆಯಲ್ಲಿ 40 ಹೆಕ್ಟೇರ್‌ಗಿಂತ ಹೆಚ್ಚಿಗೆ ಇರುವ ಒಟ್ಟು 159 ಇಲಾಖೆ ಕೆರೆಗಳು, 81 ಗ್ರಾಪಂ ಕೆರೆಗಳು, ಬಸವಸಾಗರ ಹಾಗೂ ಲಾಲ್ ಬಹಾದುರ್ ಶಾಸಿ ಜಲಾಶಯದಲ್ಲಿ ಮೀನುಗಾರಿಕೆ ಅಭಿವೃದ್ಧಿ ಪಡಿಸಲಾಗುತ್ತಿದೆ. 21 ಮೀನುಗಾರರ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, 15 ಸಾವಿರಕ್ಕೂ ಹೆಚ್ಚು ಕೃಷಿ ಹೊಂಡಗಳಲ್ಲಿ ಮೀನು ಸಾಕಣೆ ಮಾಡಲಾಗುತ್ತಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಚಾಲನೆ ಇಂದು

ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಮತ್ಸೃ ಮೇಳಕ್ಕೆ ಭಾನುವಾರ ಬೆಳಗ್ಗೆ 11 ಗಂಟೆಗೆ ಚಾಲನೆ ನೀಡಲಿದ್ದಾರೆ.ಜಿಪಂ ಅಧ್ಯಕ್ಷ ಶಿವಯೋಗೆಪ್ಪ ನೇದಲಗಿ ಅಧ್ಯಕ್ಷತೆವಹಿಸಲಿದ್ದಾರೆ. ಸಂಸದ ರಮೇಶ ಜಿಗಜಿಣಗಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

10 ಲಕ್ಷ ರೂ. ವಹಿವಾಟು ಗುರಿ

ಕಳೆದ ಬಾರಿ ಮತ್ಸೃಮೇಳದಲ್ಲಿ ಅಲಂಕಾರಿಕ ಮೀನುಗಳ ಪ್ರದರ್ಶನ ಹಾಗೂ ಮಾರಾಟದಿಂದಾಗಿ 4 ಲಕ್ಷ ರೂ.ಆದಾಯ ಹರಿದು ಬಂದಿತ್ತು. ಪ್ರಸ್ತುತ 10 ಲಕ್ಷ ರೂ. ವಹಿವಾಟು ಗುರಿ ಹೊಂದಲಾಗಿದೆ. 20 ಸಾವಿರ ದಿಂದ 30 ಸಾವಿರ ಜನರು ಸೇರುವ ನಿರೀಕ್ಷೆ ಇದೆ. 100ಕ್ಕೂ ಹೆಚ್ಚು ದೇಶಿ ಹಾಗೂ ವಿದೇಶಿ ತಳಿಯ ಮೀನುಗಳ ಪ್ರದರ್ಶನಕ್ಕೆ ಇಡಲಾಗಿದೆ ಎಂದು ವಿವರಿಸಿದರು.
ಭೂತನಾಳ ಮೀನುಗಾರಿಕೆ ಸಂಶೋಧನಾ ಮತ್ತು ಮಾಹಿತಿ ಕೇಂದ್ರದ ಮುಖ್ಯಸ್ಥ ಡಾ.ಎಸ್.ವಿಜಯಕುಮಾರ, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಸ್.ಲಮಾಣಿ ಸುದ್ದಿಗೋಷ್ಠಿಯಲ್ಲಿದ್ದರು.