ವಿಜಯಪುರ: ಛಾಯಾಗ್ರಾಹಕರಿಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಆಗ್ರಹಿಸಿ ಜಿಲ್ಲಾ ಛಾಯಾಚಿತ್ರಗ್ರಾಹಕರ ಸಂಘದ ನೇತೃತ್ವದಲ್ಲಿ ಶನಿವಾರ ಪ್ರತಿಭಟನೆ ನಡೆಸಿದ ಛಾಯಾಗ್ರಾಹಕರು ಬಳಿಕ ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಅಧ್ಯಕ್ಷ ವಿಶ್ವನಾಥ ಶಂಕರ ಬೋಸಲೆ ಮಾತನಾಡಿ, ಕರೊನಾ ಮಾಹಾಮಾರಿಯಿಂದ ಜಗತ್ತು ತಲ್ಲಣಿಸಿದೆ. ಎಲ್ಲ ವರ್ಗದ ಜನ ಸಂಕಷ್ಟಕ್ಕೆ ಈಡಾಗಿದ್ದಾರೆ. ಆರ್ಥಿಕವಾಗಿ ದಿವಾಳಿಯಾಗಿದ್ದಾರೆ. ಲಾಕ್‌ಡೌನ್‌ನಿಂದಾಗಿ ಛಾಯಾಗ್ರಾಹಕರ ಪಾಡು ಮತ್ತಷ್ಟು ಘೋರ ಸಂಕಷ್ಟಕ್ಕೆ ಸಿಲುಕಿತು. ಯಾವುದೇ ಸಭೆ, ಸಮಾರಂಭ, ಮದುವೆ ಕಾರ್ಯಕ್ರಮಗಳಿಲ್ಲದೆ ಜೀವನ ನಡೆಸುವುದೇ ದುಸ್ತರವಾಯಿತು. ಇಂಥ ಸಂದರ್ಭ ಸರ್ಕಾರ ನೆರವಿಗೆ ಬರಲಿದೆ ಎಂಬ ನಿರೀಕ್ಷೆ ಸುಳ್ಳಾಗಿದೆ. ಸರ್ಕಾರ ಅನೇಕ ವರ್ಗದವರಿಗೆ ಸಹಾಯಧನ ಘೋಷಿಸಿದ್ದು, ನಮ್ಮನ್ನು ಮಾತ್ರ ಪರಿಗಣಿಸಿಲ್ಲ. ಕೂಡಲೇ ಛಾಯಾಗ್ರಾಹಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದರು.
ಜತೆಗೆ ಛಾಯಾಚಿತ್ರಗ್ರಾಹಕರಿಗೆ ಕಾರ್ಮಿಕ ಕಾರ್ಡ್, ವಿಶೇಷ ಅನುದಾನ, ಮಕ್ಕಳಿಗೆ ವಿದ್ಯಾಭ್ಯಾಸ ಅನುದಾನ, ಆರೋಗ್ಯ ಕಾರ್ಡ್, ನಿವೇಶನ ಹೊಂದಿರುವ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದರು.
ಗೌರವಾಧ್ಯಕ್ಷ ಚಿದಂಬರ ಕುಲಕರ್ಣಿ, ವಿಠಲ ಕೊಕಟನೂರ, ಉಪಾಧ್ಯಕ್ಷ ಸತೀಶ ಜಾಧವ, ಸದಸ್ಯ ಸಂಜಯ ಜಾಧವ, ಸುರೇಶ ತೇರದಾಳ, ಸುಧೀರ ಕುಲಕರ್ಣಿ, ಅಜಯಸಿಂಗ ಹಜಾರೆ, ಸಂತೋಷ ತುಂಗಳ, ಬಾಬು ಬಿದನೂರ, ಸತೀಶ ಕಲಾಲ, ರಮೇಶ ಚವಾಣ್, ಶ್ರೀನಿವಾಸ ರೆಡ್ಡಿ, ತಿಮ್ಮಾಜಿ ಕುಲಕರ್ಣಿ, ರಾಜು ಕಬಾಡೆ, ಇಕ್ಬಾಲ್ ಕಲಾದಗಿ, ಪವನ ಅಂಗಡಿ, ಪ್ರಶಾಂತ ಅಕ್ಕಿ ಮತ್ತಿತರರಿದ್ದರು.