ವಿಜಯಪುರ: ಹದಗೆಟ್ಟ ರಸ್ತೆಗಳ ದುರಸ್ತಿಕರಣಕ್ಕೆ ಆಗ್ರಹಿಸಿ ಎಸ್‌ಯುಸಿಐ ಕಮ್ಯುನಿಷ್ಟ ಪಕ್ಷದ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಜಿಲ್ಲಾ ಕಾರ್ಯದರ್ಶಿ ಬಿ. ಭಗವಾನರೆಡ್ಡಿ ನೇತೃತ್ವ ವಹಿಸಿ ಮಾತನಾಡಿ, ನಗರಲ್ಲಿ ರಸ್ತೆಗಳೆಲ್ಲವೂ ಸಂಪೂರ್ಣ ಹದಗೆಟ್ಟಿವೆ. ಐತಿಹಾಸಿಕ ತಾಣವಾಗಿರುವ ವಿಜಯಪುರದಲ್ಲಿ ನೂರಾರು ಸ್ಮಾರಕಗಳಿದ್ದು, ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ, ಪ್ರಮುಖ ರಸ್ತೆಗಳಲ್ಲಿರುವ ಆಳ ಗುಂಡಿಗಳನ್ನು ನೋಡಿ ಛೀಮಾರಿ ಹಾಕುತ್ತಿದ್ದಾರೆ. ಗುಮ್ಮಟ ನಗರಿ ಖ್ಯಾತಿ ಬದಲಾಗಿ ಹದಗೆಟ್ಟ ರಸ್ತೆಗಳ ನಗರಿ ಎಂಬ ಕುಖ್ಯಾತಿ ಪಡೆಯುತ್ತಿರುವುದು ಖೇದಕರ ಎಂದರು.
ರಸ್ತೆ ದುರಸ್ತಿ ಕೈಗೊಳ್ಳದಿದ್ದರೆ ಮುಂಬರುವ ದಿನಗಳಲ್ಲಿ ವಿಜಯಪುರ ಹದಗೆಟ್ಟ ರಸ್ತೆಗಳನ್ನು ಹೊಂದಿದ ರಾಜ್ಯದ ನಂ. 1 ಜಿಲ್ಲೆ ಎಂಬ ಖ್ಯಾತಿಗೆ ಒಳಗಾಗಲಿದೆ. ಸದರಿ ರಸ್ತೆಗಳಲ್ಲಿ ನಿತ್ಯ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುತ್ತಿದ್ದಾರೆ. ಮಕ್ಕಳು, ಹಿರಿಯ ನಾಗರಿಕರು, ಮಹಿಳೆಯರು, ಅಂಗವಿಕಲರು, ವಾಹನ ಚಾಲಕರು ಜೀವ ಭಯದಲ್ಲಿ ಸಂಚರಿಸುತ್ತಿದ್ದಾರೆ. ಮಾಧ್ಯಮಗಳಲ್ಲಿ ವರದಿಯಾದರೂ ಆಡಳಿತ ವರ್ಗದವರು ಎಚ್ಚೆತ್ತುಕೊಂಡಿಲ್ಲ ಎಂದು ಭಗವಾನರೆಡ್ಡಿ ಆರೋಪಿಸಿದರು.
ಎಸ್‌ಯುಸಿಐ (ಕಮ್ಯುನಿಷ್ಟ್) ಜಿಲ್ಲಾ ಸಮಿತಿ ಸದಸ್ಯ ಬಾಳು ಜೇವೂರ ಮಾತನಾಡಿ, ಈಗಾಗಲೆ ಕರೊನಾ, ಅತಿವೃಷ್ಟಿ, ನೆರೆ ಎಂದೆಲ್ಲಾ ನೆಪ ಹೇಳುತ್ತಾ ನಗರದ ರಸ್ತೆಗಳ ದುರಸ್ತಿ ಕಾರ್ಯ ಕೈಗೊಂಡಿಲ್ಲ. ಕೆಲವೆಡೆ ಗುಂಡಿ ಮುಚ್ಚುವ ಭರದಲ್ಲಿ ಮತ್ತಷ್ಟು ರಸ್ತೆ ಹಾಳುಗೆಡವಿದ್ದಾರೆ. ಹೀಗಾಗಿ ಕೂಡಲೇ ರಸ್ತೆ ಡಾಂಬರಿಕರಣ ಕಾರ್ಯ ಕೈಗೊಳ್ಳಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸದಸ್ಯರಾದ ಸಿದ್ದಲಿಂಗ ಬಾಗೇವಾಡಿ, ಭರತಕುಮಾರ ಎಚ್.ಟಿ, ಮಲ್ಲಿಕಾರ್ಜುನ ಎಚ್.ಟಿ, ಕಾರ್ಯಕರ್ತರಾದ ಕಾವೇರಿ ರಜಪೂತ, ಸುರೇಖಾ ಕಡಪಟ್ಟಿ, ಆಕಾಶ, ಶೋಭಾ ಎಸ್, ಬೌರಮ್ಮ ಪಡಶೆಟ್ಟಿ, ಗುರುಬಾಯಿ ಬಿರಾದಾರ, ಮಹಾದೇವಿ, ರೇಣುಕಾ, ಪಿರ ಜಮಾದಾರ, ನಜೀರ್ ಪಟೇಲ ಮತ್ತಿತರರಿದ್ದರು.