ಜಿಲ್ಲೆ

ಸಾಯಿ ಕರ್ಮಚಾರಿಗಳ ಮರು ಸಮೀಕ್ಷೆ ಮಾಡಿ

ವಿಜಯಪುರ: ನಗರ ಸ್ಥಳಿಯ ಸಂಸ್ಥೆಗಳ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಸಾಯಿ ಕರ್ಮಚಾರಿಗಳ ಮರು ಸಮೀಕ್ಷೆ ನಡೆಸುವಂತೆ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸಾಯಿ ಕರ್ಮಾಚಾರಿಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಿಜ ಸಾಯಿ ಕರ್ಮಚಾರಿಗಳನ್ನು ಗುರುತಿಸಿ ದೃಢೀಕರಿಸಿ ಪ್ರಮಾಣ ಪತ್ರದ ಜೊತೆಗೆ ಸರ್ಕಾರದ ಸೌಲಭ್ಯಗಳು ಸಕಾಲಕ್ಕೆ ದೊರಕಿಸಲು ನಗರ ಸ್ಥಳೀಯ ಸಂಸ್ಥೆಗಳ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಯಿ ಕರ್ಮಚಾರಿಗಳ ಪ್ರತಿ ಕುಟುಂಬ ಗುರುತಿಸುವಂತೆ ಸೂಚಿಸಿದರು.

ಸಾಯಿ ಕರ್ಮಚಾರಿಗಳ ಹಿತರಕ್ಷಣೆಗಾಗಿ ಕಾನೂನು ಜಾರಿಯಲ್ಲಿದ್ದು, ಈ ಕಾನೂನು ಜಾರಿಗೆ ಬರುವ ಮುಂಚೆ 1993 ರ ಹಿಂದಿನಿಂದಲೂ ಸಾಯಿ ಕರ್ಮಚಾರಿಯಾಗಿರುವಂತಹ ನೈಜ ಕುಟುಂಬಗಳನ್ನು ಗುರುತಿಸಬೇಕು. ಅವರ ಕುಟುಂಬಗಳಿಗೆ ಸರ್ಕಾರದ ಸೌಲಭ್ಯ ಮಕ್ಕಳಿಗೆ ಶೈಕ್ಷಣಿಕ ಮತ್ತು ಇತರೆ ಸೌಲಭ್ಯ ಸೇರಿದಂತೆ ಇನ್ನಿತರ ಸೌಲಭ್ಯ ಕಲ್ಪಿಸುವಂತಾಗಬೇಕು. ಯಾವುದೇ ಸಂದರ್ಭದಲ್ಲಿ ಸಾಯಿ ಕರ್ಮಚಾರಿಗಳು ಸರ್ಕಾರಿ ಸೌಲಭ್ಯದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕೆಂದರು.

ಮಲ ಹೊರುವ ಪದ್ಥತಿ ನಿಷೇಧವಿದ್ದು, ಈ ಕುರಿತು ತೀವ್ರ ನಿಗಾ ಇಡಬೇಕು. ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವಂತೆ ಮತ್ತು ಗಂಭೀರವಾಗಿ ಪರಿಗಣಿಸುವಂತೆ ತಿಳಿಸಿದ ಅವರು ಸಕಾಲಕ್ಕೆ ಅವರಿಗೆ ನೆರವಾಗುವಂತೆ ತಿಳಿಸಿದರು.

ಅರ್ಹ ಪೌರ ಕಾರ್ಮಿಕರಿಗೆ ಮಾತ್ರ ನೇರ ಪಾವತಿಯಾಗುವಂತೆ ತಿಳಿಸಿದ ಜಿಲ್ಲಾಧಿಕಾರಿ ಸುನೀಲಕುಮಾರ ಅವರು, ಸುರಕ್ಷಿತ ಸಾಧನ ಸಲಕರಣೆಗಳು ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸುವಂತೆ ತಿಳಿಸಿ ಸಾಯಿ ಕರ್ಮಚಾರಿಗಳ ಮತ್ತು ಪೌರ ಕಾರ್ಮಿಕರನ್ನು ಸಮರ್ಪಕವಾಗಿ ಗುರುತಿಸಿ ಸೌಲಭ್ಯ ಕಲ್ಪಿಸಬೇಕು. ದಾಖಲಾತಿಗಳ ಸೂಕ್ತ ಪರಿಶೀಲನಾ ಆಧಾರದ ಮೇಲೆ ಅರ್ಹರಿಗೆ ಗುರುತಿಸಿ ಸೌಲಭ್ಯ ಕಲ್ಪಿಸಬೇಕು. ಅವರಿಗೆ ಪುನರ್ ವಸತಿ ಸೌಲಭ್ಯ ದೊರೆಯುವಂತೆ ನೋಡಿಕೊಳ್ಳಬೇಕೆಂದರು.

ಜಿಪಂ ಯೋಜನಾಧಿಕಾರಿ ನಿಂಗಪ್ಪ ಗೋಠೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಮನಗೌಡ ಕನ್ನೊಳ್ಳಿ ಮತ್ತಿತರರಿದ್ದರು.