ವಿಜಯಪುರ: ಪಕ್ಷಕ್ಕೆ ದ್ರೋಹ ಎಸಗಿದ ಜಿಪಂ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾದ ಉಮೇಶ ಕೋಳಕೂರ, ಶಿವಯೋಗೆಪ್ಪ ನೇದಲಗಿ, ಶಿವಶರಣ ಭೈರಗೊಂಡ ವಿರುದ್ಧ ಜಿಲ್ಲಾ ಕಾಂಗ್ರೆಸ್ ಸಮಿತಿ ಶುಕ್ರವಾರ ಪ್ರತಿಭಟನೆ ನಡೆಸಿತು.
ಜಿಲ್ಲಾಧ್ಯಕ್ಷ ಪ್ರೊ.ರಾಜು ಆಲಗೂರ ಮಾತನಾಡಿ, ಜೂ.30 ರಂದು ಜಿಪಂ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಸುಜಾತಾ ಕಳ್ಳಿಮನಿ ಪರ ಮತ ಚಲಾಯಿಸದೇ ಬಿಜೆಪಿ ಅಭ್ಯರ್ಥಿ ಪರ ಮತ ಚಲಾಯಿಸಿದ ಮೂವರು ಜಿಪಂ ಸದಸ್ಯರ ಪಕ್ಷ ವಿರೋಧಿ ನಡೆಯನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಖಂಡಿಸುತ್ತದೆ. ಹಣದ ಅಮೀಷಕ್ಕೊಳಗಾಗಿ ಅಧಿಕಾರ ದುರುಪಯೋಗ ಪಡಿಸಿಕೊಂಡು ತಮಗೆ ರಾಜಕೀಯ ನೆಲೆ ಒದಗಿಸಿದ ಮಾತೃ ಪಕ್ಷಕ್ಕೆ ದ್ರೋಹ ಬಗೆದು ವಂಚಿಸಿದ್ದಾರೆ ಇಂತಹವರಿಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಮತದಾರರು ಮುಂಬರುವ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಕೋವಿಡ್ ಟಾಸ್ಕ್ ಫೋರ್ಸ್ ಅಧ್ಯಕ್ಷ ಮಹಮ್ಮದ್‌ರಫೀಕ್ ಟಪಾಲ್ ಮಾತನಾಡಿ, ಬಿಜೆಪಿ ಇಡೀ ದೇಶದಲ್ಲಿ ಹಣ ಹಾಗೂ ಅಧಿಕಾರದ ದಾಹದಿಂದ ವಾಮಮಾರ್ಗದಿಂದ ಅಧಿಕಾರ ಪಡೆದಿದೆ. ಇದೇ ತಂತ್ರವನ್ನು ವಿಜಯಪುರ ಜಿಲ್ಲೆಯಲ್ಲಿ ಮಾಡಲು ಮುಂದಾಗಿತ್ತು. ಆದರೆ, ಕಾಂಗ್ರೆಸ್ ಪಕ್ಷದ ಸಮರ್ಥ ನಾಯಕರ ಪ್ರಯತ್ನದಿಂದ ಅದು ವಿಫಲವಾಯಿತು ಎಂದು ಹೇಳಿದರು.
ಜಿಪಂ ನೂತನ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಮುಖಂಡರಾದ ಅಬ್ದುಲ್‌ಹಮೀದ್ ಮುಶ್ರಿಫ್, ಐ.ಎಂ. ಇಂಡಿಕರ್, ವೈಜನಾಥ ಕರ್ಪೂರಮಠ, ಸೋಮನಾಥ ಕಳ್ಳಿಮನಿ, ಅಬ್ದುಲ್‌ಖಾದರ್, ಮಾತನಾಡಿದರು.
ಚಾಂದಸಾಬ ಗಡಗಲಾವ, ಜಮೀರ್‌ಅಹ್ನದ್ ಬಕ್ಷಿ, ಆರತಿ ಶಹಾಪುರ, ಜಮೀರ್ ಬಾಗಲಕೋಟ, ಡಾ.ಗಂಗಾಧರ ಸಂಬಣ್ಣಿ, ವಿಜಯಕುಮಾರ ಘಾಟಗೆ, ಸುರೇಶ ಘೋಣಸಗಿ, ವಸಂತ ಹೊನಮೊಡೆ, ಈರಪ್ಪ ಜಕ್ಕಣ್ಣವರ, ಸುಭಾಷ ಕಾಲೇಬಾಗ, ಫಯಾಜ್ ಕಲಾದಗಿ, ಜಯಶ್ರೀ ಭಾರತೆ, ರಾಜೇಶ್ವರಿ ಚೋಳಕೆ, ಆಸ್ಮಾ ಕಾಲೇಬಾಗ, ಅಲ್ಲಾಭಕ್ಷ ಬಾಗಲಕೋಟ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.