ವಿಜಯಪುರ: ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆಯ ವಿಜ್ಞಾನಿಗಳ ಕಾರ್ಯವೈಖರಿ ಹಾಗೂ ವಿಜ್ಞಾನಿಗಳ ಪ್ರತಿಭೆಯಿಂದಾಗಿ ವಿಶ್ವದಲ್ಲಿ ಭಾರತೀಯರು ಖ್ಯಾತಿ ಪಡೆದಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಹೇಳಿದರು.
ನಗರದ ಬಿಎಲ್‌ಡಿಇ ಸಂಸ್ಥೆಯ ಫ.ಗು. ಹಳಕಟ್ಟಿ ಇಂಜಿನಿಯರಿಂಗ್ ಮಹಾವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮಗಳ ಪಿತಾಮಹ ವಿಕ್ರಂ ಸಾರಾಭಾಯಿ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವವೇ ಅಭಿಮಾನ ಪಡುವ ರೀತಿಯಲ್ಲಿ ಇಸ್ರೋ ಸಂಸ್ಥೆಯು ತನ್ನದೇ ಆದ ಮಹತ್ವದ ಕೊಡುಗೆಯನ್ನು ನೀಡುತ್ತಿದೆ. ಈ ಸಂಸ್ಥೆಯ ವಿಜ್ಞಾನಿಗಳ ಪ್ರತಿಭೆ ಮತ್ತು ಕಾರ್ಯವೈಖರಿಯಿಂದ ನಾವು ವಿಶ್ವವಿಖ್ಯಾತಿ ಪಡೆದಿದ್ದು, ಅಂತಹ ವಿಜ್ಞಾನಿಗಳು ಇಂದು ಶಾಲಾ ಮಕ್ಕಳಿಗೆ ಪ್ರೋತ್ಸಾಹ ನೀಡಲು ಬಂದಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಂದರು.
ಇಸ್ರೋ ಸಂಸ್ಥೆ ಮಾಡಿದ ಸಾಧನೆಗಳನ್ನು ಗ್ರಾಮಾಂತರ ಪ್ರದೇಶದ ಮಕ್ಕಳಿಗೂ ತಿಳಿಯಬೇಕು ಮತ್ತು ವಿಜ್ಞಾನಿಗಳ ಪ್ರತಿಭೆಯನ್ನು ತಿಳಿಹೇಳಿ ಪ್ರೋತ್ಸಾಹಿಸುವ ಉದ್ದೇಶದೊಂದಿಗೆ ಇಂತಹ ಕಾರ್ಯಕ್ರಮ ರೂಪಿಸಲಾಗಿದೆ. ಭಾರತೀಯರು ತಾಂತ್ರಿಕತೆಯಲ್ಲಿ ತಮ್ಮದೆಯಾದ ಸ್ವಂತಿಕೆ ಹೊಂದಬೇಕು ಮತ್ತು ದೇಶದ ಸಂರಕ್ಷಣೆಗೂ ನೆರವಾಗಬೇಕೆಂಬ ಉದ್ದೇಶದೊಂದಿಗೆ ಇಸ್ರೋ ವಿಜ್ಞಾನಿಗಳು ನಿರಂತರ ಶ್ರಮ ಮತ್ತು ಪ್ರಯತ್ನಪಡುತ್ತಿದ್ದಾರೆ ಎಂದರು.
ಸರ್ ಸಿ.ವಿ ರಾಮನ್, ಎಪಿಜೆ ಅಬ್ದುಲ್ ಕಲಾಂ ಅವರಂತಹ ಅನೇಕ ಖ್ಯಾತ ವಿಜ್ಞಾನಿಗಳನ್ನು ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ದೇಶಕ್ಕೆ ಸಲ್ಲುತ್ತದೆ. ಜೈ ಜವಾನ್, ಜೈ ಕಿಸಾನ್ಷ ಘೋವಾಕ್ಯದೊಂ0ದಿಗೆ ಪ್ರಸ್ತುತ ಜೈ ವಿಜ್ಞಾನ್ ಸೇರ್ಪಡೆಗೊಂಡಿದ್ದು ಹೆಮ್ಮೆಯ ವಿಚಾರ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಬಸನಗೌಡ ಪಾಟೀಲ (ಯತ್ನಾಳ) ಮಾತನಾಡಿ, ಇಸ್ರೋ ಸಂಸ್ಥೆ ದೇಶದ ಹೆಮ್ಮೆಯ ಸಂಶೋಧನೆ ಕೇಂದ್ರವಾಗಿದೆ. ವಿಕ್ರಂ ಸಾರಾಭಾಯಿ ಜನ್ಮಶತಮಾನೋತ್ಸವ ಅಂಗವಾಗಿ ವಿವಿಧ ಜಿಲ್ಲೆ ಮತ್ತು ಹಳ್ಳಿಗಳಲ್ಲಿ ವಿಶೇಷವಾಗಿ ವಿಜಯಪುರದಲ್ಲಿ ಹಮ್ಮಿಕೊಂಡಿರುವುದು ಸಂತಸದ ವಿಷಯವಾಗಿದೆ. ಪ್ರತಿಭೆ ಯಾವುದೇ ಜಾತಿ, ಅಂತಸ್ತಿಗೆ ಸೀಮಿತವಾಗಿಲ್ಲ. ಸಂಶೋಧನೆ ಕ್ಷೇತ್ರದಲ್ಲಿ ವಿಶ್ವ ಖ್ಯಾತಿ ಪಡೆದಿರುವ ಶಕ್ತಿಯುತ ರಾಷ್ಟ್ರಗಳಾದ ಅಮೆರಿಕ, ರಷ್ಯಾ, ಚೀನಾದೊಂದಿಗೆ ಪ್ರತಿಸ್ಪರ್ಧಿಯಾಗಿ ಭಾರತವೂ ನಿಲ್ಲಲು ಇಸ್ರೋ ವಿಜ್ಞಾನಿಗಳ ಕೊಡುಗೆ ಅಪಾರ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಇಸ್ರೋ ಸಂಸ್ಥೆಯ ವಿಜ್ಞಾನಿಗಳಾದ ಅಲೋಕ್‌ಕುಮಾರ್ ಶ್ರೀವಾಸ್ತವ್, ಶ್ರೀಧರ್, ಆರ್.ಆರ್.ನವಲಗುಂದ, ವಿಲಾಸ ರಾಠೋಡ, ಜಿಪಂ ಸಿಇಒ ಗೋವಿಂದ ರೆಡ್ಡಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜೆ.ಎಸ್.ಪೂಜಾರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿ ಎಂ.ಎಸ್.ಬ್ಯಾಹಟ್ಟಿ, ಕಾಂಗ್ರೆಸ್ ಮುಖಂಡ ಕಾಂತಾನಾಯಕ ಇತರರು ಉಪಸ್ಥಿತರಿದ್ಧರು.
ವಿದ್ಯಾರ್ಥಿಗಳೊಂದಿಗೆ ಸಂವಾದ
ನಗರದ ಬಿಎಲ್‌ಡಿಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಸ್ರೋ, ಬಾಹ್ಯಾಕಾಶದ ಬಗ್ಗೆ ವಿದ್ಯಾರ್ಥಿಗಳೊಂದಿಗಿನ ಸಂವಾದ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.
ಯು.ಆರ್.ರಾವ್ ಉಪಗ್ರಹ ಕೇಂದ್ರದ ಉಪನಿರ್ದೇಶಕ ಡಾ.ಅಲೋಕ್‌ಕುಮಾರ್ ಶ್ರೀವಾಸ್ತವ್ ಮಾತನಾಡಿ, ಇಡೀ ಜಗತ್ತು ಸೆಟಲೈಟ್ ಎಂಬ ತಂತ್ರಾಂಶದ ಮೇಲೆ ನಿಂತಿದೆ. ಸಂವಹನ ಮಾಧ್ಯಮಗಳು, ಹವಾಮಾನ, ಅಂತರ್ಜಾಲ ಹೀಗೆ ಎಲ್ಲ ಕ್ಷೇತ್ರಗಳ ಬೆಳವಣಿಗೆಗೆ ಸೆಟಲೈಟ್ ಪ್ರಮುಖ ಪಾತ್ರ ವಹಿಸಿದೆ. ಒಂದು ದಿನ ಸೆಟಲೈಟ್ ಕಾರ್ಯ ನಿರ್ವಹಿಸದೆ ಇದ್ದರೆ ಇಡೀ ಜಗತ್ತು ಕತ್ತಲೆಯಲ್ಲಿ ಮುಳುಗುತ್ತದೆ ಎಂದು ತಿಳಿಸಿದರು.
ಭಾರತದ ಇಸ್ರೋ ಯಾವ ದೇಶದ ಬಾಹ್ಯಾಕಾಶ ಸಂಸ್ಥೆಗಳಿಗಿಂತ ಕಡಿಮೆ ಇಲ್ಲ. ಇಸ್ರೋ ಸಾಧನೆಯನ್ನು ಇಡೀ ಜಗತ್ತು ಕೊಂಡಾಡುತ್ತದೆ. ಏಕಕಾಲಕ್ಕೆ 104 ಸೆಟಲೈಟ್‌ಗಳನ್ನು ಇಸ್ರೋ ಉಡಾವಣೆ ಮಾಡಿದೆ ಎಂದರು. ಇಸ್ರೋ ಸಂಸ್ಥೆಯ ಸಾಧನೆಗಳು, ಚಂದ್ರಯಾನ-1, ಚಂದ್ರಯಾನ- 2 ಉಡಾವಣೆಯ ಬಗ್ಗೆ ಎರಡು ಗಂಟೆಗಳ ಕಾಲ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.
ಗಮನ ಸೆಳೆದ ಪ್ರಾತ್ಯಕ್ಷಿಕೆ
ಇದಕ್ಕೂ ಮುನ್ನ ಇಸ್ರೋ ಸಂಸ್ಥೆಯ ವಸ್ತು ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆಯನ್ನು ಬಿಎಲ್‌ಡಿಇ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಅತುಲ್ ಆಯಾರೆ, ವಿಜ್ಞಾನಿ ಶ್ರೀಧರ್ ಅವರು ಉದ್ಘಾಟಿಸಿದರು. ಪ್ರಾತ್ಯಕ್ಷಿಕೆಯಲ್ಲಿ ಚಂದ್ರಯಾನ, ಮಂಗಳಯಾನ, ಭಾರತೀಯ ನೌಕಾಯಾನ, ಬಾಹ್ಯಾಕಾಶ ವ್ಯವಸ್ಥೆ, ಭಾರತೀಯ ಬಾಹ್ಯಾಕಾಶ ಮತ್ತು ಭಾರತೀಯ ಉಪಗ್ರಹ ಸಂವಹನ ಹಾಗೂ ಶ್ರೀಹರಿಕೋಟಾ, ಸತೀಶ್ ಧವನ ಬಾಹ್ಯಾಕಾಶ ಕೇಂದ್ರಗಳ ಪ್ರಾತ್ಯಕ್ಷಿಕೆಗಳು ವಿದ್ಯಾರ್ಥಿಗಳನ್ನು ಆಕರ್ಷಿಸಿದವು.