ಜಿಲ್ಲೆ

ಎರಡನೇ ಡೋಸ್ ಪಡೆಯುವವರಿಗೆ ಆದ್ಯತೆ

ವಿಜಯಪುರ: ಜಿಲ್ಲೆಯಲ್ಲಿ ಈಗಾಗಲೇ ಕೋವಿಡ್-19 ಲಸಿಕೆ ಅಭಿಯಾನದಡಿಯಲ್ಲಿ ವಿವಿಧ ಹಂತಗಳಲ್ಲಿ ಆರೋಗ್ಯ ಕಾರ್ಯಕರ್ತರಿಗೆ, ಮುಂಚೂಣಿ ಕಾರ್ಯಕರ್ತರಿಗೆ ಹಾಗೂ 45 ವರ್ಷ ಮೇಲ್ಪಟ್ಟ ನಾಗರಿಕರಿಗೆ ಲಸಿಕೆಯನ್ನು ನೀಡಲಾಗುತ್ತಿದೆ.

ಮೇ 6ರಿಂದ ಸರ್ಕಾರದ ಮಾರ್ಗಸೂಚಿ ಪ್ರಕಾರ ಎರಡನೇ ಡೋಸ್ ಪಡೆಯಲು ಅರ್ಹವಿರುವ ನಾಗರಿಕರಿಗೆ ಕರೊನಾ ಲಸಿಕೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಸುನೀಲ್‌ಕುಮಾರ್ ಹೇಳಿದ್ದಾರೆ.

ಶೇ.30 ರಷ್ಟು 45 ವರ್ಷ ಮೇಲ್ಪಟ್ಟ ನಾಗರಿಕರಿಗೆ ಲಸಿಕೆಯ ಮೊದಲ ಡೋಸ್ ನೀಡಲಾಗುವುದು. ಮೊದಲನೇ ಡೋಸ್ ಪಡೆಯುವ 45 ವರ್ಷ ಮೇಲ್ಪಟ್ಟ ನಾಗರಿಕರು ಜಿಲ್ಲಾ ಆಸ್ಪತ್ರೆ, ಎಲ್ಲ ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳು, ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ನಗರ ಆರೋಗ್ಯ ಕೇಂದ್ರಗಳಿಗೆ ತೆರಳಿ ಲಸಿಕೆಯನ್ನು ಪಡೆಯಬೇಕೆಂದು ತಿಳಿಸಿದ್ದಾರೆ.

ಸರ್ಕಾರದ ಮಾರ್ಗಸೂಚಿಯಂತೆ ಜಿಲ್ಲೆಯಲ್ಲಿ 18 ರಿಂದ 44 ವರ್ಷದ ನಾಗರಿಕರಿಗೆ ಕರೊನಾ ಲಸಿಕೆಯನ್ನು ನೀಡಲಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಸರ್ಕಾರ ನೀಡುವ ನಿರ್ದೇಶನ ಹಾಗೂ ಮಾರ್ಗಸೂಚಿಗಳಂತೆ 18-44 ವರ್ಷದ ನಾಗರಿಕರಿಗೆ ಲಸಿಕೆಯನ್ನು ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

257ಕ್ಕೇರಿದ ಸಾವಿನ ಸಂಖ್ಯೆ
ಜಿಲ್ಲೆಯಲ್ಲಿ ಬುಧವಾರ ಮತ್ತೆ ನಾಲ್ವರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 257ಕ್ಕೆ ಏರಿಕೆ ಆಗಿದೆ. 83 ವರ್ಷದ ವೃದ್ಧ, 70 ವರ್ಷದ ವೃದ್ಧೆ ಹಾಗೂ 74 ವರ್ಷದ ಇಬ್ಬರು ವೃದ್ಧರು ಮೃತಪಟ್ಟಿದ್ದಾರೆ. ಹೊಸದಾಗಿ 452 ಜನರಿಗೆ ಕೋವಿಡ್ ಸೋಂಕು ದೃಢವಾಗಿದ್ದು, 331 ಜನರು ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. 3,117 ಸಕ್ರಿಯ ಪ್ರಕರಣಗಳಿದ್ದು, ಇನ್ನೂ 2,418 ಜನರ ವರದಿ ಬರಬೇಕಿದೆ.

ವಿಜಯಪುರ ನಗರದಲ್ಲಿ ಕರೊನಾ ಸೋಂಕು ದ್ವಿಶತಕ (200) ಬಾರಿಸಿದೆ. ಇನ್ನುಳಿದಂತೆ ವಿಜಯಪುರ ಗ್ರಾಮೀಣ 19, ಬಬಲೇಶ್ವರ 7, ತಿಕೋಟಾ 8, ಬ.ಬಾಗೇವಾಡಿ 12, ಕೊಲ್ಹಾರ 12, ನಿಡಗುಂದಿ 2, ಇಂಡಿ 34, ಮುದ್ದೇಬಿಹಾಳ 67, ತಾಳಿಕೋಟೆ 15, ಸಿಂದಗಿ 41, ದೇವರಹಿಪ್ಪರಗಿ 23 ಹಾಗೂ ಇತರ ಜಿಲ್ಲೆಯ 12 ಜನರಿಗೆ ಸೋಂಕು ದೃಢವಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.