ಜಿಲ್ಲೆ

ಸಂತ್ರಸ್ತರಿಗೆ 132.31 ಲಕ್ಷ ರೂ. ಪರಿಹಾರಧನ ವಿತರಣೆ

ವಿಜಯಪುರ: ದೌರ್ಜನ್ಯ ಪ್ರಕರಣಗಳಲ್ಲಿ ನೊಂದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಸಂತ್ರಸ್ತರಿಗೆ ಜಿಲ್ಲಾಡಳಿತ ವತಿಯಿಂದ 132.31 ಲಕ್ಷ ರೂ. ಪರಿಹಾರ ಧನ ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಹೇಳಿದರು.

ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

2021ರ ಜನವರಿಯಿಂದ ಆಗಸ್ಟ್ ತಿಂಗಳವರೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಜನಾಂಗಗಳ ಮೇಲೆ 72 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 56 ಪ್ರಕರಣಗಳಲ್ಲಿ ನೊಂದ ಸಂತ್ರಸ್ತರಿಗೆ 132.31 ಲಕ್ಷ ರೂ. ಪರಿಹಾರಧನ ವಿತರಿಸಲಾಗಿದೆ. ವಿವಿಧ ನ್ಯಾಯಾಲಯ ಹಂತದಲ್ಲಿರುವ ಬಾಕಿ ಇರುವ 6 ಪ್ರಕರಣಗಳಲ್ಲಿ ಪರಿಹಾರ ಧನ ಇನ್ನೂ ವಿತರಿಸಬೇಕಾಗಿದ್ದು, ಅನುದಾನದ ಕೊರತೆ ಇಲ್ಲ ಎಂದರು.

ಸಿಂದಗಿ ತಾಲೂಕಿನ ಹೊಸೂರ ಗ್ರಾಮದಲ್ಲಿ ಪ್ರಗತಿ ಕಾಲನಿ ಯೋಜನೆಯಡಿ ಕೈಗೊಂಡ ಕ್ರಮದ ಬಗ್ಗೆ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ವರದಿ ಸಲ್ಲಿಸಬೇಕು. ನೋಡಲ್ ಅಧಿಕಾರಿಗಳಾದ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರೂ ಇಂತಹ ಕಾಮಗಾರಿಗಳ ಬಗ್ಗೆ ಅನುಸರಣೆ ಮಾಡುವಂತೆ ಅವರು ತಿಳಿಸಿದರು.

ಸಿಂದಗಿ ತಾಲೂಕಿನ ಕೆಸರಟ್ಟಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕಾಮಗಾರಿಗಳನ್ನು ವ್ಯವಸ್ಥಿತ ರೀತಿಯಲ್ಲಿ ಕೈಗೊಳ್ಳಬೇಕು. ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ‘ಡಿ’ ವೃಂದದ ನೌಕರರ ಮುಂಬಡ್ತಿಗೆ ಸಂಬಂಧಿಸಿದಂತೆ ಶೀಘ್ರ ಕ್ರಮ ಕೈಗೊಳ್ಳಬೇಕು. ಇಂಡಿ ಪುರಸಭೆ ವ್ಯಾಪ್ತಿಯಲ್ಲಿ ಅಂಗಡಿಗಳನ್ನು ಸರ್ಕಾರದ ಮಾರ್ಗಸೂಚಿಯಂತೆ ಪಾರದರ್ಶಕವಾಗಿ ಹಂಚಿಕೆ ಮಾಡಲು ತಿಳಿಸಿದರಲ್ಲದೆ, ಇಂತಹ ಸೌಲಭ್ಯ ಪಡೆದಿರುವ ಲಾನುಭವಿಗಳೇ ಅಂಗಡಿಗಳನ್ನು ನೋಡಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಜಿಪಂ ಸಿಇಒ ಗೋವಿಂದ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದಕುಮಾರ, ಉಪವಿಭಾಗಾಧಿಕಾರಿ ಬಲರಾಮ ಲಮಾಣಿ, ಚೋರಗಸ್ತಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಾಮನಗೌಡ ಕನ್ನೊಳ್ಳಿ, ಜಿಪಂ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಸಮಿತಿ ಸದಸ್ಯರಾದ ಮನೋಹರ ಕಾಂಬಳೆ, ಅರವಿಂದ ಸಾಲವಾಡಗಿ, ಮುತ್ತಣ್ಣ ಸಾಸನೂರ, ಬಸವರಾಜ ಪೂಜಾರಿ, ರಾಜಶೇಖರ ಕೂಚಬಾಳ, ವಿನಾಯಕ ಗುಣಸಾಗರ, ಗಣಪತಿ ಬಾಣಿಕೋಲ, ಶಿವಾನಂದ ಪಟ್ಟೇದ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.