ಜಿಲ್ಲೆ

ವಿಜಯಪುರ ಅಭಿವೃದ್ಧಿಗೆ ಆದ್ಯತೆ ನೀಡಿ

ವಿಜಯಪುರ: ಐತಿಹಾಸಿಕ ಸ್ಮಾರಕಗಳನ್ನು ಹೊಂದಿರುವ ವಿಜಯಪುರ ನಗರದ ಮುಖ್ಯ ರಸ್ತೆಗಳ ಸುಧಾರಣೆ ಹಾಗೂ ನಗರ ಸೌಂದರೀಕರಣಕ್ಕೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಒದಗಿಸಲು ವಿಶೇಷ ಗಮನ ನೀಡುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಿ.ರಂದೀಪ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ, ಪ್ರವಾಹ ಮತ್ತು ಮಳೆ ಹಾನಿ ಕುರಿತು ಪರಿಶೀಲನೆ ಹಾಗೂ ಕೋವಿಡ್-19 ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಅವರು ಮಾತನಾಡಿದರು.

ದೆಹಲಿ ನಂತರ ಅತಿಹೆಚ್ಚು ಐತಿಹಾಸಿಕ ಸ್ಮಾರಕಗಳನ್ನು ಹೊಂದಿರುವ ವಿಜಯಪುರ ಸರ್ವಾಂಗೀಣ ಅಭಿವೃದ್ಧಿಗೆ ಗಮನ ನೀಡಬೇಕು. ವಿಶೇಷವಾಗಿ ಮುಖ್ಯ ರಸ್ತೆಗಳ ನಿರ್ಮಾಣ, ಘನ ತ್ಯಾಜ್ಯ ನಿರ್ವಹಣೆ, ಬೀದಿ ದೀಪಗಳ ಸುಧಾರಣೆ ಸೇರಿದಂತೆ ಸರ್ವಾಂಗೀಣ ಅಭಿವೃದ್ಧಿಗೆ ನೆರವಾಗುವ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದರು.

ಐತಿಹಾಸಿಕ ಸ್ಮಾರಕಗಳನ್ನು ಹೊಂದಿರುವ ವಿಜಯಪುರ ನಗರ ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಗೊಳ್ಳಬೇಕಾಗಿದೆ. ಕ್ರಿಯಾಯೋಜನೆಯನ್ವಯ ಅಥಣಿ, ಸೊಲ್ಲಾಪುರ, ಬಾಗಲಕೋಟೆ ಮತ್ತು ಸಿಂದಗಿ ಕಡೆಗೆ ಹೋಗುವಂತಹ ರಸ್ತೆಗಳು ಆಂತರಿಕ ರಸ್ತೆಗಳಿಗೆ ಸಂಪರ್ಕ ಹೊಂದಿದ್ದು, ಇಂತಹ ರಸ್ತೆಗಳ ಸುಧಾರಣೆಗೆ ಗಮನ ನೀಡಬೇಕು. ವಿಶೇಷ ಪ್ಯಾಕೇಜ್ ರೂಪದಲ್ಲಿ ಅನುದಾನ ತರಲು ಪ್ರಯತ್ನಿಸಲಾಗುವುದು ಎಂದರು.

ಪುರಾತತ್ವ ಮತ್ತು ಸರ್ವೇಕ್ಷಣಾ ಇಲಾಖೆ ಮೂಲಕ ಅನುದಾನಕ್ಕೆ ತಾಂತ್ರಿಕ ಅನುಮೋದನೆ ಪಡೆಯಬೇಕೆಂದು ತಿಳಿಸಿದ ಅವರು, ನಗರದ ಸ್ವಚ್ಛತೆ, ವೈಯಕ್ತಿಕ ಶೌಚಗೃಹ ಅತ್ಯುತ್ತಮ ನಿರ್ವಹಣೆ, ಘನ ತ್ಯಾಜ್ಯಗಳ ನಿರ್ವಹಣೆ ಇತರ ಅಭಿವೃದ್ಧಿ ಕಾರ್ಯಗಳ ಸಮರ್ಪಕ ನಿರ್ವಹಣೆ ಮೂಲಕ ಸುಂದರ ನಗರ ರೂಪಿಸಲು ಸಾಧ್ಯವಿದ್ದು, ಮಹಾನಗರ ಪಾಲಿಕೆ, ಪ್ರವಾಸೋದ್ಯಮ ಸೇರಿದಂತೆ ಇತರ ಅವಶ್ಯಕ ಇಲಾಖೆಗಳು ತಮ್ಮ ವ್ಯಾಪ್ತಿಯಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.

ನಗರ ಸೌಂದರೀಕರಣದಿಂದ ಹೂಡಿಕೆದಾರರನ್ನು ಆಕರ್ಷಿಸಲು ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ನೀಡುವ ಅಗತ್ಯವಿದೆ. ಘನ ತ್ಯಾಜ್ಯಗಳ ಮತ್ತು ಕಸ ನಿರ್ವಹಣೆಗೆ ಏಕೀಕೃತ ನಿಯಂತ್ರಣ ವ್ಯವಸ್ಥೆ ಜಾರಿಗೆ ಕ್ರಮಕೈಗೊಳ್ಳಬೇಕು. ತೆರಿಗೆ ಬಾಕಿ ವಸೂಲಾತಿಗೆ ಮತ್ತು ಸಂಗ್ರಹಕ್ಕೆ ಗಮನ ನೀಡುವಂತೆ ತಿಳಿಸಿದ ಅವರು, ಜಿಲ್ಲೆಯಲ್ಲಿ ಅರಣ್ಯ ಪ್ರಮಾಣ ಕಡಿಮೆ ಇರುವ ಹಿನ್ನೆಲೆಯಲ್ಲಿ ನಗರದ ಹೊರವಲಯದಲ್ಲಿ ಅರಣ್ಯ ಭೂಮಿ ಗುರುತಿಸಲು ಪ್ರಯತ್ನಿಸಬೇಕು. ಇಕೋ ಟೂರಿಸಂ ಅಭಿವೃದ್ಧಿಗೆ ಪ್ರಸ್ತಾವನೆ ಸಿದ್ಧಪಡಿಸಬೇಕು. ಅರಣ್ಯ ಅಧಿಕಾರಿಗಳು ಅರಣ್ಯೀಕರಣ ಮತ್ತು ಇಕೋ ಟೂರಿಸಂ ಕುರಿತು ಪಿಪಿಟಿ ಮೂಲಕ ವರದಿ ಸಿದ್ಧಪಡಿಸಲು ಸೂಚನೆ ನೀಡಿದರು.

ಪೂರ್ವ ಚಟುವಟಿಕೆ ಆರಂಭ

ವಿಜಯಪುರ ನಗರದ ಸಮೀಪ ಬುರಾಣಪುರ ಗ್ರಾಮದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ವಿಮಾನ ನಿಲ್ದಾಣಕ್ಕೆ ಸಂಬಂಧಪಟ್ಟಂತೆ ಪ್ಯಾಕೇಜ್ ಒಂದರ ಕಾಮಗಾರಿಗೆ ಸಂಬಂಧಪಟ್ಟಂತೆ ಟೆಂಡರ್ ಏಜೆನ್ಸಿ ನಿಗದಿಯಾಗಿದ್ದು, ಪೂರ್ವ ಚಟುವಟಿಕೆ ಆರಂಭಗೊಂಡಿವೆ. ಇನ್ನು ಬೇಸಿಗೆಯಲ್ಲಿ ತೀವ್ರ ನೀರಿನ ಸಂಕಷ್ಟ ಎದುರಿಸುತ್ತಿದ್ದ ಜಿಲ್ಲೆ ಕ್ರಮೇಣ ನೀರಿನ ಕೊರತೆಯಿಂದ ಹೊರಬರುತ್ತಿರುವುದಕ್ಕೆ ರಂದೀಪ್ ಸಂತಸ ವ್ಯಕ್ತಪಡಿಸಿದರು.

ಏಜೆನ್ಸಿ ರದ್ದು ಪಡಿಸಲು ಸೂಚನೆ

ಕ್ರೀಡಾ ಇಲಾಖೆ ವ್ಯಾಪ್ತಿಯ ಸೈಕ್ಲಿಂಗ್ ವೆಲೋಡ್ರೋಮ್ ನಿರ್ಮಾಣ ಮಾಡಲು ವಿಳಂಬ ಮಾಡುತ್ತಿರುವ ಹಿನ್ನೆಲೆ ಸರ್ಕಾರದ ನಿಯಮಾವಳಿಯಂತೆ ಏಜೆನ್ಸಿಯನ್ನು ರದ್ದುಪಡಿಸಿ, ಬಾಕಿ ಅನುದಾನ ವಸೂಲಾತಿ ಮಾಡಿ ನೂತನ ಟೆಂಡರ್ ಕರೆಯುವ ಬಗ್ಗೆ ಸಂಬಂಧಪಟ್ಟ ಇಲಾಖೆ ಮೇಲಾಧಿಕಾರಿಗಳ ಗಮನಕ್ಕೆ ತರುವಂತೆ ಕ್ರೀಡಾಧಿಕಾರಿಗಳಿಗೆ ರಂದೀಪ್ ಸೂಚಿಸಿದರು.

ಪ್ರವಾಹ ಹಾನಿ ವರದಿ ನೀಡಿ

ಇತ್ತೀಚೆಗೆ ಭೀಮಾನದಿ ವ್ಯಾಪ್ತಿಯಲ್ಲಿ ಪ್ರವಾಹ ಮತ್ತು ಅತಿವೃಷ್ಟಿಯಿಂದ ಹಾನಿಯಾದ ಕುರಿತು ಸಮಗ್ರ ವರದಿ ನೀಡುವಂತೆ ಅಧಿಕಾರಿಗೆ ರಂದೀಪ್ ತಿಳಿಸಿದರು. ಪ್ರವಾಹದಿಂದ ಆಗುವ ಹಾನಿಯನ್ನು ತಪ್ಪಿಸಲು ಭವಿಷ್ಯದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ, ಸಿದ್ಧತೆಗಳ ಬಗ್ಗೆ ಈಗಿನಿಂದಲೇ ಚಿಂತನೆ ನಡೆಸಿ ಹೆಚ್ಚಿನ ಸಾವು ನೋವು ಆಗದಂತೆ ರಕ್ಷಣಾ ಕ್ರಮಗಳ ಬಗ್ಗೆ ಪೂರ್ವ ಯೋಜನೆ ಸಿದ್ಧಪಡಿಸಿಟ್ಟುಕೊಳ್ಳಬೇಕು. ಪರಿಹಾರಕ್ಕಾಗಿ ಮಂಜೂರಾದ ಅನುದಾನ, ಪರಿಹಾರ ನೀಡಿದ ಬಗ್ಗೆ ದಾಖಲೀಕರಣ ಸಮರ್ಪಕವಾಗಿರುವಂತೆ ನೋಡಿಕೊಳ್ಳಬೇಕು ಎಂದರು.

ಕೋವಿಡ್ ಲಸಿಕೆ ಅರಿವು

ಕೋವಿಡ್ ಹಿನ್ನೆಲೆ ಇತರ ಲಸಿಕಾ ಕಾರ್ಯಕ್ರಮಗಳ ಮೇಲೆ ಪರಿಣಾಮ ಆಗದಂತೆ ನಿಗಾ ವಹಿಸಬೇಕು. ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಕೋವಿಡ್ ಲಸಿಕಾ ಕಾರ್ಯಕ್ರಮಕ್ಕೆ ಪೂರ್ವಾಭ್ಯಾಸದ ಜತೆಗೆ ಮುಂದಿನ ದಿನಗಳಲ್ಲಿ ನೀಡಬಹುದಾದ ಲಸಿಕೆ ಬಗ್ಗೆ ಸಾರ್ವಜನಿಕರಲ್ಲಿ ಸೂಕ್ತ ಅರಿವು ಮೂಡಿಸಬೇಕು. ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸೂಕ್ತ ಜಾಗೃತಿ ಮೂಡಿಸುವ ಕಾರ್ಯ ನಿರಂತರ ನಡೆಯಬೇಕು. ಕೋವಿಡ್ ರೋಗಿಗಳಿಗೆ ಇರುವಂತಹ ಪ್ರಾಥಮಿಕ ಮತ್ತು ಮಾಧ್ಯಮಿಕ ಸಂಪರ್ಕಗಳ ಮತ್ತು ಹೋಮ್ ಐಸೋಲೇಷನ್‌ಗಳ ಬಗ್ಗೆ ಹೆಚ್ಚಿನ ಗಮನ ನೀಡುವಂತೆ ರಂದೀಪ್ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಔದ್ರಾಮ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮ ಅರಿಸಿದ್ಧಿ, ಉಪ ವಿಭಾಗಾಧಿಕಾರಿ ರಾಹುಲ್ ಸಿಂಧೆ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.