ವಿಜಯಪುರ: ಬಿಡಾಡಿ ದನಗಳನ್ನು ರಸ್ತೆಗೆ ಬಿಟ್ಟರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಎಚ್ಚರಿಕೆ ನೀಡಿದರು.
ರಾಷ್ಟ್ರೀಯ ಕೃತಕ ಗರ್ಭಧಾರಣೆ ಮೂಲಕ ರಾಸುಗಳ ತಳಿ ಉನ್ನತೀಕರಣ ಕಾರ್ಯಕ್ರಮ ಹಾಗೂ ಜಾನುವಾರುಗಳ ಕಾಲು, ಬಾಯಿ ಬೇನೆ ಲಸಿಕಾ ಕಾರ್ಯಕ್ರಮಗಳ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ನಗರದಲ್ಲಿ ವಿವಿಧ ರಸ್ತೆಗಳಲ್ಲಿ ಬಿಡಾಡಿ ದನಗಳ ಓಡಾಟದಿಂದ ಸಾರ್ವಜನಿಕರಿಗೆ ಅನನುಕೂಲವಾಗುವ ಜತೆಗೆ ರಸ್ತೆ ಅವಘಡಕ್ಕೂ ಕಾರಣವಾಗುತ್ತದೆ. ಬಿಡಾಡಿ ದನ, ಕರುಗಳ ಮಾಲೀಕರಿಗೆ ಅಂತಿಮ ಗಡುವು ಹಾಗೂ ಸೂಕ್ತ ತಿಳಿವಳಿಕೆ ನೀಡಬೇಕು ಎಂದು ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಿದರು.
ರಸ್ತೆಗಳಲ್ಲಿ ಅಲೆದಾಡುವಂತಹ ಬಿಡಾಡಿ ದನಗಳನ್ನು ಸರ್ಕಾರದಿಂದ ಸೌಲಭ್ಯ ಪಡೆಯುತ್ತಿರುವ ಗೋ ಶಾಲೆಗಳಿಗೆ ರವಾನಿಸಲಾಗುತ್ತದೆ. ಈ ಕುರಿತು ಮಹಾನಗರ ಪಾಲಿಕೆ ಅಧಿಕಾರಿಗಳು, ಪಶುಸಂಗೋಪನಾ ಇಲಾಖೆ ಅಧಿಕಾರಿಗಳು, ಪ್ರಾಣಿದಯಾ ಸಂಘದ ಸದಸ್ಯರು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸುವ ಜತೆಗೆ ನಗರದ ಸ್ವಚ್ಛತೆ ಮತ್ತು ಸೌಂದರ್ಯ ಹೆಚ್ಚಿಸಲು ಬೀದಿಗಳಲ್ಲಿ ದನಕರುಗಳು ಓಡಾಡದಂತೆ ಮಾಲೀಕರಿಗೆ ತಿಳಿಸುವಂತೆ ಸೂಚನೆ ನೀಡಿದರು.
ರಾಷ್ಟ್ರೀಯ ಕೃತಕ ಗರ್ಭಧಾರಣೆ ಕಾರ್ಯಕ್ರಮ ಮುಂದಿನ ವರ್ಷ ಮೇ ವರೆಗೆ ನಡೆಯಲಿದೆ. ಜಾನುವಾರುಗಳ ಉತ್ಪಾದಕತೆಯನ್ನು ಹೆಚ್ಚಿಸುವ ಮೂಲಕ ರೈತರ ಆದಾಯ ಹೆಚ್ಚಿಸಲು ಜಿಲ್ಲೆಯಲ್ಲಿ ಒಟ್ಟು 500 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಪ್ರತಿ ತಾಲೂಕಿಗೆ 100 ಗ್ರಾಮಗಳನ್ನು ಆಯ್ಕೆ ಮಾಡಲಾಗಿದ್ದು, ಆಧಾರ್ ಸಂಖ್ಯೆ ಮಾದರಿಯಲ್ಲಿ ಪ್ರತಿ ಆಯ್ದ ಜಾನುವಾರಿಗೆ ಕಿವಿಯೋಲೆ ಅಳವಡಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಒಟ್ಟು 3.70 ಲಕ್ಷ ಜಾನುವಾರುಗಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, ಯಾವುದೇ ಜಾನುವಾರು ಈ ಲಸಿಕೆಯಿಂದ ವಂಚಿತವಾಗದಂತೆ ನೋಡಿಕೊಳ್ಳಲು ಸೂಚಿಸಿದರು.
ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಪ್ರಾಣೇಶ ಜಹಾಗೀರದಾರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ವಿಲಿಯ್ಸಂ, ಆರೋಗ್ಯ ಇಲಾಖೆ ಅಧಿಕಾರಿ ಡಾ.ಮಹೇಂದ್ರ ಕಾಪ್ಸೆ, ಕೆಎಂಎ್ ವ್ಯವಸ್ಥಾಪಕ ನಿರ್ದೇಶಕ ಸಂಜೀವ ದಿಕ್ಷೀತ್, ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ಅಶೋಕ ಅಲ್ಲಾಪುರ, ಪ್ರಾಣಿ ದಯಾ ಸಂಘದ ಸದಸ್ಯರಾದ ದೀಪಕ್ ತಾಳಿಕೋಟೆ, ಸಿದ್ದು ನ್ಯಾಮಗೊಂಡ, ರಶ್ಮಿ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.