ಜಿಲ್ಲೆ

ಜಿಲ್ಲಾದ್ಯಂತ ಸಿಆರ್‌ಪಿಸಿ ಕಲಂ 144 ಜಾರಿ

ವಿಜಯಪುರ: ಹೆಚ್ಚುತ್ತಿರುವ ಕರೊನಾ ಹಾವಳಿ ಹಿನ್ನೆಲೆ ಜಿಲ್ಲಾದ್ಯಂತ ಸಿಆರ್‌ಪಿಸಿ ಕಲಂ 144 ಜಾರಿಗೊಳಿಸಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಆದೇಶಿಸಿದ್ದಾರೆ.
ಸೋಮವಾರದಿಂದಲೇ ಆದೇಶ ಜಾರಿಯಾಗಲಿದ್ದು, ಮಾ. 31ರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ ಮುಂದುವರಿಯಲಿದೆ. 5ಕ್ಕಿಂತ ಹೆಚ್ಚು ಜನ ಕೂಡಿ ತಿರುಗಾಡುವುದನ್ನು ನಿಷೇಧಿಸಲಾಗಿದೆ. ಮಾರುಕಟ್ಟೆ, ಮಾಲ್, ಸೂಪರ್ ಬಜಾರ್, ಬಾರ್ ಮತ್ತು ರೆಸ್ಟೋರೆಂಟ್ ಹಾಗೂ ಧಾಬಾಗಳನ್ನು ಬಂದ್ ಮಾಡಲು ಸೂಚಿಸಲಾಗಿದೆ. ಹೋಟೆಲ್, ಎಂಎಸ್‌ಐಎಲ್, ವೈನ್‌ಶಾಪ್‌ಗಳಲ್ಲಿ ಪಾರ್ಸಲ್ ಮಾತ್ರ ಪಡೆಯಲು ಅವಕಾಶವಿದೆ. ಪ್ರಾರ್ಥನಾ ಸ್ಥಳಗಳಲ್ಲಿ ಹೆಚ್ಚು ಜನ ಸೇರುವುದನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳ ನಿರ್ದೇಶನದಂತೆ ಪಟ್ಟಣಗಳಿಂದ ವಿವಿಧ ಗ್ರಾಮಗಳಿಗೆ ಪ್ರವಾಸ ಮಾಡದಿರಲು ಮತ್ತು ಅನಗತ್ಯವಾಗಿ ಪ್ರವಾಸ ಕೈಗೊಳ್ಳುವುದನ್ನು ಬಿಡಲು ಮನವಿ ಮಾಡಿರುವ ಜಿಲ್ಲಾಧಿಕಾರಿ ಪಾಟೀಲ, ಆಧಾರ್- ಬ್ಯಾಂಕ್ ಸೇವೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಅತ್ಯವಶ್ಯಕ ವಸ್ತುಗಳು, ತರಕಾರಿ, ಔಷಧಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ. ಈಗಾಗಲೇ ಸಭೆ, ಸಮಾರಂಭ, ಸಂತೆ, ಜಾತ್ರೆಗಳನ್ನು ನಿರ್ಬಂಧಿಸಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿಯೂ ಅತ್ಯವಶ್ಯಕ ವಸ್ತುಗಳ ವಾಹನ, ವೈದ್ಯಕೀಯ ವಸ್ತುಗಳಿಗೆ ಮಾತ್ರ ಅನುಮತಿಸಿದೆ. ಜಿಲ್ಲೆಯ ಒಳಗೆ ಬಸ್‌ಗಳ ಸಂಚಾರ ವ್ಯವಸ್ಥೆಯನ್ನು ಮಂಗಳವಾರ ಕಲ್ಪಿಸಲು ನಿರ್ಧರಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಮೂವರ ಮೇಲೆ ಪ್ರಕರಣ ದಾಖಲು

ಗೃಹಬಂಧನ ನಿರ್ದೇಶನ ಪಾಲಿಸದ ಮೂವರ ವಿರುದ್ಧ ಕಾನೂನಿನ ರೀತ್ಯ ಪ್ರಕರಣ ದಾಖಲಿಸಲು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಸೋಮವಾರ ಅಧಿಕಾರಿಗಳ ಸಭೆ ನಡೆಸಿದ ಅವರು, ವಿಶ್ವ ಮತ್ತು ದೇಶಾದ್ಯಂತ ಹಾಗೂ ನೆರೆ- ಹೊರೆ ಜಿಲ್ಲೆಗಳಿಗೂ ವ್ಯಾಪಿಸಿರುವ ಕರೊನಾ ನಿಯಂತ್ರಣಕ್ಕೆ ಸರ್ಕಾರ ನಿರ್ದೇಶನ ನೀಡಿದೆ. ಅದರನ್ವಯ ಜಿಲ್ಲೆಯಲ್ಲಿ ಗೃಹಬಂಧನ ಅವಧಿಯಲ್ಲಿ ನಿರ್ದೇಶನ ಪಾಲನೆಗೆ ಸೂಚಿಸಿದ್ದರೂ ಸಾರ್ವಜನಿಕರ ಹಿತದೃಷ್ಟಿ ಕಾಪಾಡದೆ ವ್ಯತಿರಿಕ್ತವಾಗಿ ನಡೆದ ಮೂವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನಿನ ರೀತ್ಯ ಪ್ರಕರಣ ದಾಖಲಿಸಬೇಕೆಂದು ತಿಳಿಸಿದರು.
ತಜ್ಞ ವೈದ್ಯರು, ಪೊಲೀಸ್ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಗಳ ಹಿರಿಯ ಅಧಿಕಾರಿಗಳ ಚಿಂತನೆ ಮತ್ತು ಸಲಹೆ ಮೇರೆಗೆ ಗೃಹಬಂಧನ ವ್ಯವಸ್ಥೆ ಪರಿಣಾಮಕಾರಿ ಜಾರಿಗೆ ಕ್ರಮಕೈಗೊಂಡಿದೆ. ಗೃಹ ಬಂಧನದಲ್ಲಿರುವವರು 14 ದಿನಗಳ ಕಾಲ ಮನೆಗಳಲ್ಲಿಯೇ ಪ್ರತ್ಯೇಕವಾಗಿ ಇರಬೇಕಾಗಿದ್ದು, ನಿರ್ದೇಶನಗಳನ್ನು ಪಾಲಿಸದೆ ಮನೆಯಿಂದ ಹೊರಗೆ ಹೋಗುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು, ಸೂಕ್ತ ಆರೋಗ್ಯ ಚಿಕಿತ್ಸೆಗೆ ಸ್ಪಂದಿಸದೆ ಇರುವುದು, ಸ್ಟಾೃಂಪಿಂಗ್ ಮಾಡಿಕೊಳ್ಳಲು ನಿರಾಕರಿಸುವುದು, ವಿದೇಶದಿಂದ ಆಗಮಿಸಿದ್ದರೂ ನಿಗದಿತ ಸಮಯಕ್ಕೆ ವರದಿ ಮಾಡಿಕೊಳ್ಳದೆ ಇರುವುದು ಸೇರಿದಂತೆ ಇತರ ನಿರ್ದೇಶನ ಪಾಲಿಸದಿದ್ದಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು. ಅದರಂತೆ ಈಗಾಗಲೇ ಗೃಹಬಂಧನದಲ್ಲಿರುವವರ ನಿಗಾಕ್ಕೆ ಸಾರ್ವಜನಿಕರ ಕಣ್ಗಾವಲು, ಪೊಲೀಸ್ ಮತ್ತು ಆರೋಗ್ಯ ಸಿಬ್ಬಂದಿ ನಿಯೋಜನೆ ಮಾಡಿದ್ದು, ಈ ಸಿಬ್ಬಂದಿ ನಿರ್ಲಕ್ಷೃ ತೋರಿದಲ್ಲಿ ಅವರ ವಿರುದ್ಧವೂ ಸೂಕ್ತಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಸಿಬ್ಬಂದಿಗೆ ಸ್ಯಾನಿಟೈಸರ್ ವ್ಯವಸ್ಥೆ

ಬಿಎಲ್‌ಡಿಇ ಸಂಸ್ಥೆ ಮತ್ತು ನಂದಿ ಶುಗರ್ಸ್‌ ಸಹಯೋಗದೊಂದಿಗೆ ಸ್ಯಾನಿಟೈಸರ್‌ಗಳನ್ನು ನಿಯಮಗಳ ಪ್ರಕಾರ ಉತ್ಪಾದನೆಗೆ ಸಹಕರಿಸುತ್ತಿದ್ದು, ಜಿಲ್ಲೆಯಲ್ಲಿ ಕರೊನಾ ನಿಯಂತ್ರಣ ಕರ್ತವ್ಯದಲ್ಲಿರುವ ಸಿಬ್ಬಂದಿಗೆ ಪೂರೈಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಜಿಪಂ ಸಿಇಒ ಗೋವಿಂದ ರೆಡ್ಡಿ, ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ್, ಡಿವೈಎಸ್‌ಪಿ ಲಕ್ಷ್ಮಿ ನಾರಾಯಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಹೇಂದ್ರ ಕಾಪಸೆ, ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿ ಮುಕುಂದ ಗಲಗಲಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಶರಣಪ್ಪ ಕಟ್ಟಿ, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಜಿ. ಗಂಗಾಧರ ಮತ್ತಿತರರಿದ್ದರು.

ಗಡಿ ಭಾಗದಲ್ಲಿ ಕಟ್ಟೆಚ್ಚರ

ಕರೊನಾ ಸೋಂಕಿತರು ಒಳನುಸುಳದಂತೆ ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲೆಯ ಗಡಿಭಾಗಗಳಲ್ಲಿ 23 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲು ಕ್ರಮಕೈಗೊಳ್ಳಲಾಗಿದ್ದು, ಪೊಲೀಸ್, ಕಂದಾಯ ಹಾಗೂ ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಯನ್ನು ಒಳಗೊಂಡ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಅನುಪಮ ಅಗರವಾಲ್ ಅವರು ತಿಳಿಸಿದ್ದಾರೆ.
ಮಹಾರಾಷ್ಟ್ರ ಮತ್ತು ಕಲಬುರಗಿ ಜಿಲ್ಲೆಯಿಂದ ಬರುವ ಮತ್ತು ಹೋಗುವ ವಾಹನಗಳಿಗೆ ಸೋಮವಾರ ಬೆಳಗ್ಗೆಯಿಂದ ಹಾಗೂ ರಾಯಚೂರು, ಯಾದಗಿರಿ, ಬೆಳಗಾವಿ, ಬಾಗಲಕೋಟೆ, ಧಾರವಾಡಗಳಿಂದ ಆಗಮಿಸುವ ಮತ್ತು ಹೋಗುವ ವಾಹನಗಳಿಗೆ ಸೋಮವಾರ ಸಂಜೆ 6 ರಿಂದ ನಿರ್ಬಂಧಿಸಲಾಗಿದೆ. ಅತ್ಯವಶ್ಯಕ ವಸ್ತುಗಳು, ಮೆಡಿಕಲ್ ಆಂಬುಲೆನ್ಸ್ ಹಾಗೂ ಸಕ್ಷಮ ಪ್ರಾಧಿಕಾರಿಗಳಿಂದ ಅನುಮತಿ ಪಡೆದ ವಾಹನಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತಿದೆ. ಅಗತ್ಯವಿರುವ ಕಡೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಸೋಮವಾರ ಪೂರ್ವಾಹ್ನದವರೆಗೆ ವಿದೇಶದಿಂದ ಒಟ್ಟು 290 ಜನರು ಬಂದ ಬಗ್ಗೆ ವರದಿಯಿದೆ. 173 ಜನ ಗೃಹ ಬಂಧನದಲ್ಲಿದ್ದಾರೆ. 6 ಜನರ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ವಿದೇಶಿಗರನ್ನು ಹೊರತುಪಡಿಸಿ 8 ಜನರ ಮೇಲೆ ತೀವ್ರ ನಿಗಾ ಇಡಲಾಗಿದೆ.
ವೈ.ಎಸ್. ಪಾಟೀಲ, ಜಿಲ್ಲಾಧಿಕಾರಿ