ವಿಜಯಪುರ: ದ್ವಿತೀಯ ಪಿಯು ಪರೀಕ್ಷೆ ಮಾ. 4ರಿಂದ ಮಾ. 23ರ ವರೆಗೆ ಜರುಗಲಿದ್ದು, ಯಾವುದೇ ಲೋಪದೋಷಗಳಾಗದಂತೆ ಹಾಗೂ ಪರೀಕ್ಷೆ ಪಾವಿತ್ರ್ಯತೆ ಕಾಪಾಡುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಎಸ್. ಬಿ. ಕಲಾ ಹಾಗೂ ಕೆ.ಸಿ.ಪಿ. ವಿಜ್ಞಾನ ಕಾಲೇಜಿನ ಆವರಣದಲ್ಲಿ ಗುರುವಾರ ನಡೆದ ದ್ವಿತೀಯ ಪಿಯು ಪರೀಕ್ಷೆ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಟ್ಟು 27,359 ವಿದ್ಯಾರ್ಥಿಗಳಲ್ಲಿ 15,972 ವಿದ್ಯಾರ್ಥಿಗಳು, 11,387 ವಿದ್ಯಾರ್ಥಿನಿಯರು ಪರೀಕ್ಷೆ ಬರೆಯಲಿದ್ದಾರೆ. ಜಿಲ್ಲೆಯಲ್ಲಿ 4 ಸರ್ಕಾರಿ ಕಾಲೇಜು, 27 ಅನುದಾನಿತ ಹಾಗೂ 10 ಅನುದಾನ ರಹಿತ ಕಾಲೇಜುಗಳಲ್ಲಿ ಜಿಲ್ಲೆಯಾದ್ಯಂತ ಒಟ್ಟು 41 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿದೆ ಎಂದರು.
ದ್ವಿತೀಯ ಪಿಯುಸಿ ಪರೀಕ್ಷಾ ಕೇಂದ್ರಗಳ ಕೊಠಡಿ ಹಾಗೂ ಹೊರಾಂಗಣದಲ್ಲಿ ಸಿಸಿಟಿವಿ ವ್ಯವಸ್ಥೆ ಮಾಡಲಾಗಿದ್ದು, ಪರೀಕ್ಷಾ ಕೇಂದ್ರದಲ್ಲಿ ಮುಖ್ಯ ಅಧೀಕ್ಷಕರನ್ನು ಹೊರತು ಪಡಿಸಿ, ಮತ್ತೆ ಯಾರೂ ಸ್ಮಾರ್ಟ್‌ೆನ್ ಬಳಸುವಂತಿಲ್ಲ. ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳಲ್ಲಿ ಹಾಗೂ ವಿದ್ಯಾರ್ಥಿಗಳು ನೆಲದ ಮೇಲೆ ಪರೀಕ್ಷೆಯನ್ನು ಬರೆಸುವಂತಿಲ್ಲ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ದಂಡ ಪ್ರಕ್ರಿಯೆ 1973ರ ಪ್ರಕಾರ ಸೆಕ್ಷನ್ 107 ಹಾಗೂ 110 ರ ಪ್ರಕಾರ ಪರೀಕ್ಷೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಇನ್ನಿತರ ರೀತಿಯಲ್ಲಿ ಊಹಾಪೋಹಗಳನ್ನು ಹಬ್ಬಿಸುವ ವ್ಯಕ್ತಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ದ್ವಿತೀಯ ಪಿಯು ಪರೀಕ್ಷೆಯ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಪರೀಕ್ಷೆ ಕೇಂದ್ರಗಳಿಗೆ ಹೆಚ್ಚಿನ ಪೊಲೀಸ್ ವ್ಯವಸ್ಥೆ ಹಾಗೂ ಜಾಗೃತದಳಗಳನ್ನು ನೇಮಿಸಲಾಗುವುದು ಎಂದರು.
ದ್ವಿತೀಯ ಪಿಯು ಪರೀಕ್ಷೆ ಸಮಯದಲ್ಲಿ ಸೆಕ್ಷನ್ 144 ಜಾರಿಯಲ್ಲಿರುತ್ತದೆ. ಪರೀಕ್ಷೆ ಕೊಠಡಿಗಳಲ್ಲಿ ಪರೀಕ್ಷೆ ನಡೆಯುವ ಸಮಯದಲ್ಲಿ ಮುಖ್ಯ ಅಧೀಕ್ಷಕರನ್ನು ಹೊರತು ಪಡಿಸಿ, ಅನ್ಯರಿಗೆ ಪ್ರವೇಶ ಕಲ್ಪಿಸಬಾರದು ಎಂದು ತಿಳಿಸಿದರು.
ದ್ವಿತೀಯ ಪಿಯು ಪರೀಕ್ಷೆಯ ಅಂತಿಮ ಪ್ರವೇಶ ಪತ್ರಗಳನ್ನು ಪಿಯು ಬೋರ್ಡ್‌ನ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಂಡು ಆಯಾ ಶಾಲೆಯ ಪ್ರಾಚಾರ್ಯರು, ವಿದ್ಯಾರ್ಥಿಗಳಿಗೆ ವಿತರಿಸಬೇಕು ಎಂದು ಹೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಔದ್ರಾಮ, ಉಪ ವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ, ಪಿಯು ಇಲಾಖೆ ಉಪ ನಿರ್ದೇಶಕ ಜೆ.ಎಸ್. ಪೂಜಾರಿ, ತಾಲೂಕು ತಹಸೀಲ್ದಾರರು, ಪೊಲೀಸ್ ಅಧಿಕಾರಿಗಳು, ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು, ಇತರರು ಉಪಸ್ಥಿತರಿದ್ದರು.