ಜಿಲ್ಲೆ

ಆದ್ಯತೆ ಮೇಲೆ ಕುಡಿವ ನೀರು ಪೂರೈಸಿ

ವಿಜಯಪುರ: ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಿಗೆ ನೀರಿನ ಕೊರತೆಯಾಗದಂತೆ ಅವಶ್ಯಕ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗಿನ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳ ಬಗ್ಗೆ ಕ್ಷೇತ್ರ ಭೇಟಿ ನೀಡಿ ಪರಿಶೀಲಿಸಬೇಕು. ಯಾವುದೇ ಪರಿಸ್ಥಿತಿಯಲ್ಲಿ ಜನರಿಗೆ ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲು ಅವರು ಸೂಚಿಸಿದರು.

ನೀರಿನ ಅಭಾವ ಎದುರಿಸುತ್ತಿರುವ ಗ್ರಾಮಗಳಲ್ಲಿ ಅವಶ್ಯಕತೆ ಇರುವ ಕಡೆ ಖಾಸಗಿ ಬೋರ್‌ವೆಲ್ ಮಾಲೀಕರ ಸಹಾಯ ಪಡೆಯುವ ಬಗ್ಗೆ ಸೂಕ್ತ ಸಮೀಕ್ಷೆ ನಡೆಸಬೇಕು. ಅವಶ್ಯಕತೆ ಇದ್ದಾಗ ಮಾತ್ರ ಹಣ ಪೋಲಾಗದೆ ಬೋರ್‌ವೆಲ್ ಕೊರೆಯಿಸಲು ತಿಳಿಸಿದ ಅವರು, ಖಾಸಗಿ ಬೋರ್‌ವೆಲ್‌ಗಳನ್ನು ಸುಪರ್ದಿಗೆ ಪಡೆದು ಸೂಕ್ತ ಕ್ರಮ ಕೈಗೊಳ್ಳಬೇಕು. ಟ್ಯಾಂಕರ್ ಮೂಲಕ ನೀರು ಸರಬರಾಜು ಕುರಿತು ತಾಂತ್ರಿಕವಾಗಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲು ತಿಳಿಸಿದರು.

ಕೋವಿಡ್-19 ಇರುವ ಹಿನ್ನ್ನೆಲೆಯಲ್ಲಿ ವಿವಿಧ ಗ್ರಾಮ ಮತ್ತು ತಾಂಡಾಗಳಲ್ಲಿ ವಲಸೆ ಹೋಗಿರುವ ಜನರು ಮರಳಿ ಬಂದಿದ್ದಾರೆ. ಅವರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಬೇಕು. ಸರ್ಕಾರದ ಅನುದಾನದಲ್ಲಿ ಇಂಡಿ, ಸಿಂದಗಿ, ಮುದ್ದೇಬಿಹಾಳ ಭಾಗದಲ್ಲಿ ಕುಡಿಯುವ ನೀರಿನ ಪೂರೈಕೆಗೆ ಒತ್ತು ನೀಡುವಂತೆ ಸೂಚಿಸಿದರು.

ಜಿಪಂ ಸಿಇಒ ಗೋವಿಂದ ರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ಜಲಸಂಪನ್ಮೂಲ ಲಭ್ಯ ಇರುವ ಕಡೆ ಬೋರ್‌ವೆಲ್ ಕೊರೆಯಲು, ಖಾಸಗಿ ಬೋರ್‌ವೆಲ್ ಸಹಕಾರ ಪಡೆದು ಜನರಿಗೆ ನೀರಿನ ಕೊರತೆಯಾಗದಂತೆ ನಿಗಾ ವಹಿಸಬೇಕು. ಕ್ಷೇತ್ರ ಮಟ್ಟದಲ್ಲಿ ಪರಿಶೀಲಿಸಿ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು ಎಂದರು. ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಔದ್ರಾಮ್ ಇತರರು ಉಪಸ್ಥಿತರಿದ್ದರು.

StartFragment

EndFragment