ಜಿಲ್ಲೆ

ಸಿಎಂ ಪರಿಹಾರ ನಿಧಿಗೆ 2 ಲಕ್ಷ ರೂ. ದೇಣಿಗೆ

ವಿಜಯಪುರ: ವ್ಯಾಪಕವಾಗಿ ಹರಡುತ್ತಿರುವ ಕರೊನಾ ನಿಯಂತ್ರಣಕ್ಕೆ ಜೆಡಿಎಸ್ ಶಾಸಕ ದೇವಾನಂದ ಚವಾಣ್ 2 ಲಕ್ಷ ರೂ.ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಪರಿಹಾರ ನಿಧಿಗೆ ಶನಿವಾರ ಚೆಕ್ ಹಸ್ತಾಂತರಿಸಿದ ಚವಾಣ್ ಅವರು ಜಿಲ್ಲಾಡಳಿತ ಅವಕಾಶ ಕಲ್ಪಿಸಿದಲ್ಲಿ ಗುಳೆಕಾರರ ನೆರವಿಗೂ ಮುಂದಾಗುವ ಭರವಸೆ ನೀಡಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಚವಾಣ್, ಕರೊನಾ ಮಾನವ ಜನ್ಮಕ್ಕೆ ಮಾರಕವಾಗಿದೆ. ಅನೇಕರು ಜಿಲ್ಲೆಯಿಂದ ಉದ್ಯೋಗ ಅರಸಿ ಗುಳೆ ಹೋಗಿದ್ದಾರೆ. ನೆರೆಯ ಗೋವಾ ಹಾಗೂ ಮಹಾರಾಷ್ಟ್ರಕ್ಕೆ ಜಿಲ್ಲೆಯ 20 ಸಾವಿರ ಜನ ದುಡಿಯಲು ಹೋಗಿದ್ದಾರೆ. ಅಲ್ಲಿ ಅವರಿಗೆ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಇತ್ತ ತವರಿಗೂ ಮರಳಲಾಗುತ್ತಿಲ್ಲ. ಹೀಗಾಗಿ ಅವರಿಗೆ ಸೂಕ್ತ ವ್ಯವಸ್ಥೆ ಮಾಡಲು ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ. ಇಲ್ಲವೆ, ಗಡಿ ಭಾಗದಲ್ಲಿ ವಿಶೇಷ ಗಂಜಿ ಕೇಂದ್ರ ಸ್ಥಾಪಿಸಿ ವೈದ್ಯಕೀಯ ಸೌಲಭ್ಯ ಒದಗಿಸಲು ತಿಳಿಸಲಾಗಿದೆ. ತಮಗಾದರೂ ಅವಕಾಶ ಕಲ್ಪಿಸಿದ್ದಲ್ಲಿ ಪೂರಕ ಸೌಲಭ್ಯ ಕಲ್ಪಿಸಿಕೊಡುವ ಬಗ್ಗೆ ಮನವರಿಕೆ ಮಾಡಿದ್ದಾಗಿ ತಿಳಿಸಿದರು.