ಜಿಲ್ಲೆ

ಸಂವಿಧಾನ ವಿರೋಧಿ ಸರ್ಕಾರ ಬೇಕಿಲ್ಲ

ವಿಜಯಪುರ: ಧಾರ್ಮಿಕ ತಳಹದಿ ಮೇಲೆ ಕಾಯ್ದೆ ರೂಪಿಸುವ, ದೇಶವನ್ನು ಧರ್ಮಾಧಾರಿತವಾಗಿ ಒಡೆದು ಆಳುವ, ಹೋರಾಟದ ಹಕ್ಕನ್ನು ಕಿತ್ತುಕೊಳ್ಳುವ, ವಿದ್ಯಾರ್ಥಿಗಳ ಮೇಲೆ ಗೂಂಡಾಗಿರಿ ಮೆರೆಯುವ ಸರ್ಕಾರ ನಮಗೆ ಬೇಕಿಲ್ಲ ಎಂದು ಮುಸ್ಲಿಂ ಮಹಿಳೆಯರು ಒಕ್ಕೊರಲಿನಿಂದ ಘೋಷಣೆ ಕೂಗಿದರು.
ನಗರದ ದರಬಾರ್ ಮೈದಾನದಲ್ಲಿ ಸೋಮವಾರ ಮುಸ್ಲಿಂ ಮುತ್ತಹೀದಾ ಕೌನ್ಸಿಲ್ ಮಹಿಳಾ ಘಟಕದ ನೇತೃತ್ವದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಹಮ್ಮಿಕೊಂಡಿದ್ದ ಬೃಹತ್ ಮಹಿಳಾ ಆಂದೋಲನ ಹಾಗೂ ಪ್ರತಿಭಟನೆಯಲ್ಲಿ ಇಂಥದ್ದೊಂದು ಘೋಷಣೆ ಮೊಳಗಿತು.
ಹೋರಾಟಗಾರ್ತಿ ಬೆಂಗಳೂರಿನ ಅಮೂಲ್ಯ ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭಟನೆಗೆ ಹೆದರುವ ಪ್ರಧಾನಿ ಹೋರಾಟವನ್ನು ದಮನ ಮಾಡಲು ಯತ್ನಿಸುತ್ತಿದ್ದಾರೆ. ಆ ಮೂಲ ಗೂಂಡಾ ಪ್ರವೃತ್ತಿ ಮೆರೆಯುತ್ತಿದ್ದಾರೆ. ಭಾರತೀಯ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರವ ಸರ್ಕಾರ ನಮಗೆ ಬೇಕಿಲ್ಲ ಎಂದು ಹೇಳಿದರು.
ದೇಶದ ಕೋಟ್ಯಂತರ ರೂ.ಗಳನ್ನು ಕಬಳಿಸಿದ ವಿಜಯ ಮಲ್ಯ ಓಡಿ ಹೋಗಿದ್ದಾರೆ, ಅಂಬಾನಿ ನಿತ್ಯ ದೇಶದ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ, ಇವರನ್ನು ಒಳಗೆ ಹಾಕುವುದನ್ನು ಬಿಟ್ಟು ಹೋರಾಟಗಾರರನ್ನು ಜೈಲಿಗೆ ಕಳುಹಿಸುವ ಕುಕೃತ್ಯಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ ಎಂದರು.
ದೇಶದಲ್ಲಿ ಜಿಡಿಪಿ ಪಾತಾಳಕ್ಕೆ ಕುಸಿದಿದೆ, ಉತ್ತರ ಪ್ರದೇಶದಲ್ಲಿ ಗೂಂಡಾರಾಜ್ಯ ತಾಂಡವವಾಡುತ್ತಿದೆ, ಅನೇಕರಿಗೆ ಊಟವೂ ದೊರಕುತ್ತಿಲ್ಲ, ಹೀಗಿರುವಾಗ ನಾವು ಬೆವರು ಹರಿಸಿದ ದುಡಿದ ತೆರಿಗೆಯ ಕೋಟ್ಯಂತರ ಹಣವನ್ನು ಜನರನ್ನು ಒಡೆಯುವ ಕಾರ್ಯಕ್ಕೆ ತೊಡಗಿಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು.
ಚಿಂತಕಿ ಡಾ.ಅಫ್ರೋಜ್ ಫಾತಿಮಾ, ಹೀನಾಕೌಸರ್ ಫಾತಿಮಾ, ಪ್ರೊ.ಷಹನಹಾಜ್ ಮಾಲದಾರ ಮತ್ತಿತರರಿದ್ದರು.